ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ







ಯಕ್ಷಗಾನದ ಕಲಾಭಾಷೆ

ಭಾಷೆ ಎಂದರೇನು? ಮಾತು, ಹೇಳುವಿಕೆ, ತಿಳಿಸುವ ಸಾಧನ, ತಿಳಿಸುವ ವಿಧಾನ ಎಂದು ಅರ್ಥವಷ್ಟೆ? ಎಂದರೆ ಭಾಷೆ ಎಂಬುದು ನಿಶ್ಚಿತವಾದ ಸಂಕೇತಗಳ ವ್ಯವಸ್ಥೆ (System of Symbols) ಶಬ್ದ, ಧ್ವನಿ, ಬರಹಗಳ ಮೂಲಕ ವಿಷಯವನ್ನು, ಭಾವವನ್ನು ತಿಳಿಸುವಂತಹದು ಭಾಷೆ, ಕನ್ನಡ, ಮರಾಠಿ, ಇಂಗ್ಲಿಷ್ ಇವು ಹೀಗೆ ಭಾಷೆಗಳು. ಅವುಗಳಿಗೆಲ್ಲ ಸಾಮಾನ್ಯವಾಗಿರುವ, ಮತ್ತು ಒಂದೊಂದಕ್ಕೆ ಪ್ರತ್ಯೇಕವಾಗಿರುವ ವಿಧಾನಗಳು ಇರುತ್ತವೆ. ಭಾಷೆಗೊಂದು 'ಒಳವ್ಯವಸ್ಥೆ' ಇದೆ.

ಆದರೆ ಭಾಷೆ ಎಂದರೆ ಮಾತನಾಡುವ, ಓದುವ ಭಾಷೆಗಳಾಗಿರುವ ಇಂಗ್ಲಿಷ್, ಕನ್ನಡ ಮೊದಲಾದುವಷ್ಟೆ ಅಲ್ಲ. ಇನ್ನೂ ಬೇರೆ ಬೇರೆ 'ಭಾಷೆ'ಗಳಿವೆ. ಅವುಗಳನ್ನು ತಿಳಿದವರಿಗೆ ಅವುಗಳಲ್ಲಿ ವ್ಯವಹರಿಸಲು ಸಾಧ್ಯ. ಉದಾ: ಕೈಸನ್ನೆಗಳು, ಟ್ರಾಫಿಕ್ ಸಿಗ್ನಲ್‌ಗಳು, ನೃತ್ಯದ ವಿಧಾನಗಳು, ರಂಗದ ಕ್ರಮಗಳು — ಇವೆಲ್ಲ ಭಾಷೆಗಳೇ. ಹೀಗೆ ಅನೇಕ ರೀತಿಯ ಭಾಷೆಗಳಿವೆ. ಅವುಗಳ ಸಂಕೇತ ವ್ಯವಸ್ಥೆಗಳ ಸ್ವರೂಪವೂ ಗಾತ್ರವೂ ಉದ್ದೇಶಕ್ಕೆ ಸರಿಯಾಗಿ ಬೇರೆ ಬೇರೆ ಇರುತ್ತವೆ.

ಈ ನೆಲೆಯಲ್ಲಿ ಚಿತ್ರ, ನೃತ್ಯ, ವಾದ್ಯ, ಗಾಯನ, ಕೆತ್ತನೆ, ಕುಸುರಿ — ಮೊದಲಾದವುಗಳು ತಾವೇ ಒಂದೊಂದು ಭಾಷೆಯಾಗಿವೆ. ಒಂದೊಂದು ಕಲೆಗೂ ತನ್ನದಾದ ಭಾಷೆ ಇರುತ್ತದೆ. ಉದಾ: ಭರತನಾಟ್ಯ ಪದ್ಧತಿಯ ನೃತ್ಯದಲ್ಲಿ ಮುಷ್ಟಿ ಹಿಡಿದು ಹೆಬ್ಬೆರಳು ಮೇಲ್ಮೊಗವಾಗಿ

* ಡಾ. ಎಂ. ಪ್ರಭಾಕರ ಜೋಶಿ