ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
16
ಮುಡಿ

ಚಾಚಿ ಇದ್ದರೆ - ರಾಜ, ಶ್ರೇಷ್ಠ, ಪರ್ವತ ಇತ್ಯಾದಿ ಅರ್ಥವಾಗುತ್ತದೆ. ಡ್ರಿಲ್‌ನಲ್ಲಿ 1, 2, 3, 4 ವಿಸಿಲ್ ಹೊಡೆದು ಐದನೆಯದು ಉದ್ದಕ್ಕೆ ಹೊಡೆದಾಗ ಸಾಕು ನಿಲ್ಲಿಸಿ ಎಂದು ಅರ್ಥ.ಹೀಗೆ ಒಂದೊಂದು ಭಾಷೆಯಗೂ ಹೇಳುವ ಕ್ರಮಗಳಿರುತ್ತವೆ. ಹೀಗೆಯೇ ಒಂದು ಭಾಷೆ ಇರುವಂತಹ ಕಲಾಪ್ರಕಾರವು ಯಕ್ಷಗಾನವೆಂಬ ನೃತ್ಯ, ಸಂಗೀತ, ಮಾತು, ನಾಟಕ ತಂತ್ರಗಳು ಸೇರಿದ ಒಂದು ವಿಷಯ. ಒಂದು ಕಲಾರೂಪ, ವಸ್ತು.

ಯಕ್ಷಗಾನವು ಹಾಡು, ಗಾಯನ, ವಾದ್ಯಗಳ ಹಿನ್ನೆಲೆಯಲ್ಲಿ ವೇಷ-ನರ್ತನ-ಮಾತುಗಳಿಂದ ಕೂಡಿ ಕತೆಯೊಂದನ್ನು ರಂಗಕ್ರಿಯೆಯಾಗಿ, ಭಾವಯುಕ್ತವಾಗಿ ನೀಡುತ್ತದೆ, ಪ್ರದರ್ಶಿಸುತ್ತದೆ. 'ಆಟ'ವನ್ನು ಆಡಿ ತೋರಿಸುತ್ತದೆ. (ಅಥವಾ ವೇಷ ನೃತ್ಯಗಳಿಲ್ಲದೆ ತಾಳಮದ್ದಳೆಯ ಮೂಲಕ ಪ್ರದರ್ಶಿಸುತ್ತದೆ) ಹೀಗೆ ಅದಕ್ಕೆ ಅಂಗ, ಉಪಾಂಗಗಳಿವೆ - ಭಾಷೆಗೆ ಶಬ್ದ, ವಾಕ್ಯ, ಧ್ವನಿ, ವಿಧಾನ ಇರುವ ಹಾಗೆ - ಅಲ್ಲೊಂದು ಪ್ರತ್ಯೇಕತೆ ಎಂಬುದು ಇದೆ. ಯಕ್ಷಗಾನದ ವೇಷ, ಮಾತಿನ ರೀತಿ ನಾಟಕದ ಹಾಗಲ್ಲ, ಸಿನೆಮಾದ ಹಾಗೆ ಅಲ್ಲ, ನಮ್ಮ ನಿತ್ಯ ಜೀವನದ ಹಾಗೆ ಅಲ್ಲ. ಅದೇ ಅದರ ಪ್ರತ್ಯೇಕತೆ, ಅದರ 'ಭಾಷಾ ವಿಶೇಷ'. ಇದನ್ನು ತಿಳಿದು ಅರ್ಥವಿಸಿದರೆ ಮಾತ್ರ ನಮಗೆ ಆ ಕಲೆಯನ್ನು ಸವಿಯಲು, ತಿಳಿಯಲು, ಸರಿ ತಪ್ಪು ಭಾವಿಸಲು ಸಾಧ್ಯ.

ಒಂದೆರಡು ಉದಾಹರಣೆಗಳನ್ನು ನೋಡೋಣ, ರಾಕ್ಷಸನ ವೇಷ, ಮುಖದಲ್ಲಿ ಮುಳ್ಳುಗಳಂತಹ 'ಚುಟ್ಟಿ'ಗಳಿಂದ ಅಲಂಕೃತವಾಗಿ, ಅಲ್ಲಲ್ಲಿ ಹತ್ತಿಯ ಉಂಡೆಗಳನ್ನು ಅಂಟಿಸಿಕೊಂಡು, ದೊಡ್ಡ 'ತಡ್ಪೆ ಕಿರೀಟ' ಇಟ್ಟು ಬರುತ್ತವೆ. ಆರ್ಭಟೆ ಕೊಡುತ್ತವೆ. ನಿಜವಾದ ರಾಕ್ಷಸನೂ ಹಾಗಿರಲಾರ ಎಂದು ನಮಗೆ ಗೊತ್ತಿದೆ. ಆದರೆ 'ಇದೇನು ಮುಖದಲ್ಲೆಲ್ಲ ಮುಳ್ಳುಗಳು, ಆಗಾಗ ಬೊಬ್ಬೆ ಹೊಡೆಯುತ್ತಾನೆ, ತನ್ನವರಲ್ಲಿ ಮಾತಾಡುವಾಗಲೂ ಜೋರಾಗಿ ಮಾತಾಡಿದಂತಿದೆಯಲ್ಲ!" ಎಂದು ನಾವು ಹೇಳುವುದಿಲ್ಲ. 'ನಾನು ನಾಟಕದಲ್ಲಿ ನೋಡಿದ ರಾಕ್ಷಸ ಹೀಗಿರಲಿಲ್ಲ' ಎನ್ನುವುದಿಲ್ಲ. ಯಾಕೆ? 'ಅದು ಯಕ್ಷಗಾನದ ವೇಷ. ರಾಕ್ಷಸನೆಂದರೆ ಹಾಗೆಯೆ. ಅದು ಈ ಕಲೆಯ ಕ್ರಮ' ಎನ್ನುತ್ತೇವೆ. ಅಥವಾ ಇನ್ನೂ ಸರಳವಾಗಿ 'ಯಕ್ಷಗಾನದಲ್ಲಿ ಅದು ಹಾಗೆಯೇ'ಎನ್ನುತ್ತೇವೆ. ಎಂದರೆ ನಮಗೆ ಯಕ್ಷಗಾನದ ಭಾಷೆ ತಿಳಿದಿದೆ. ಅದರ ವಿಧಾನವನ್ನು, ಶೈಲಿಯನ್ನು ನಾವು ತಿಳಿದಿದ್ದೇವೆ, ಎಂದು ಅರ್ಥ. ಆ ವೇಷವು ಒಂದು ಶೈಲೀಕೃತ ಕಲ್ಪನಾ ಸೃಷ್ಟಿ, ರಾಕ್ಷಸನ ಭೀಕರತೆಗೆ ಕೊಟ್ಟ ರೂಪ ಅದು ಎಂದು ನಾವು ತಿಳಿದಿದ್ದರೆ ಮಾತ್ರ, ನಮ್ಮ ನೋಡುವಿಕೆ ಸರಿಯಾಗುತ್ತದೆ.

ರಾಜನೊಬ್ಬ ರಂಗದಲ್ಲಿ ಚಿಕ್ಕ ಪೀಠ (ರಥ)ದಲ್ಲಿ ಕುಳಿತು ಅದನ್ನು ಸಿಂಹಾಸನವೆಂದು ಹೇಳಿದಾಗ, ಒಂದು ಸುತ್ತು ಬಂದು ಆಸ್ಥಾನದಿಂದ ಹೊರಟು ಕಾಡಿಗೆ ಬಂದಿದ್ದೇನೆ' ಅನ್ನುವಾಗ

* ಡಾ. ಎಂ. ಪ್ರಭಾಕರ ಜೋಶಿ