ವಿಷಯಕ್ಕೆ ಹೋಗು

ಪುಟ:ಯಕ್ಷ ಪ್ರಭಾಕರ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಡಾ. ಪುರುಷೋತ್ತಮ ಬಿಳಿಮಲೆ ಮುಖ್ಯಸ್ಥರು, ಕನ್ನಡ ವಿಭಾಗ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ, ನವದೆಹಲಿ
ಡಾ. ಪುರುಷೋತ್ತಮ ಬಿಳಿಮಲೆ
ಮುಖ್ಯಸ್ಥರು, ಕನ್ನಡ ವಿಭಾಗ
ಜವಾಹರಲಾಲ್ ನೆಹರೂ
ವಿಶ್ವವಿದ್ಯಾಲಯ, ನವದೆಹಲಿ

ಕನ್ನಡದ ಬಹುರೂಪೀ ಪ್ರತಿಭೆ ಡಾ. ಎಂ. ಪ್ರಭಾಕರ ಜೋಶಿ


ಕಳೆದ ಸುಮಾರು ನಲವತ್ತು ವರ್ಷಗಳಿಂದ ಡಾ. ಎಂ. ಪ್ರಭಾಕರ ಜೋಶಿ (ಜನನ 1946)ಯವರನ್ನು ನಾನು ಹತ್ತಿರದಿಂದ, ದೂರದಿಂದ ನೋಡುತ್ತಲೇ ಬಂದಿದ್ದೇನೆ. ಅವರ ಚುರುಕಿನ ಅರ್ಥಗಾರಿಕೆ ಮತ್ತು ಆಕರ್ಷಕ ಭಾಷಣಗಳಿಗೆ ಕಿವಿಗೊಟ್ಟಿದ್ದೇನೆ. ಪತ್ರಿಕೆಗಳಲ್ಲಿ ಅವರು ಬರೆಯುವ ಸಂಕ್ಷಿಪ್ತ ಲೇಖನಗಳಲ್ಲಿ ಹುದುಗಿರುವ ಅಪಾರ ಅರ್ಥಗಳನ್ನು ಗ್ರಹಿಸಲು ಪ್ರಯತ್ನಿಸಿದ್ದೇನೆ. ಅವರು ಬರೆದ ಹಲವು ಪುಸ್ತಕಗಳನ್ನು ಮತ್ತೆ ಮತ್ತೆ ಪರಾಮರ್ಶಿಸುತ್ತಲೇ ಬಂದಿದ್ದೇನೆ. ನಾವಿಬ್ಬರೂ ಭಿನ್ನ ಭಿನ್ನ ನೆಲೆಗಳಿಂದ ನಮ್ಮಚರಿತ್ರೆ, ವರ್ತಮಾನ, ಸಂಸ್ಕೃತಿ, ಭಾಷೆ, ಕಲೆ ಇತ್ಯಾದಿಗಳನ್ನು ನೋಡುತ್ತಲೇ ಬಂದವರು. ಈ ತಾತ್ವಿಕ ಭಿನ್ನತೆಯುಅವರ ಬಗೆಗಣ ನನ್ನ ಗೌರವವನ್ನು ಸದಾ ಹೆಚ್ಚು ಮಾಡುತ್ತಲೇ ಬಂದಿದೆಯಲ್ಲದೆ, ಒಂದಿನಿತೂ ಕಡಿಮೆ ಮಾಡಿಲ್ಲ. ಅವರು ವಾಲ್ಮೀಕಿ, ಶಂಕರಾಚಾರ, ವರಾಹಮಿಹಿರ, ಕುಮಾರಿಲ, ಮಧ್ವಾಚಾರ ಮೊದಲಾದವರ ಬಗ್ಗೆ ಅಸ್ಥಲಿತವಾಗಿ ಮಾತಾಡುವಾಗ ನಾನು ಮೈನಿಮಿರಿಸಿ ಕೇಳುತ್ತೇನೆ. ಹಾಗೆಯೇ ನಾನು ಕಲ್ಕುಡ, ಕಲ್ಲುರ್ಟಿ, ದಲಿತರು, ಪಂಪ ಮೊದಲಾದವರ ಬಗ್ಗೆ ಹೇಳಿದರೆ ಡಾ. ಜೋಶಿಯವರು ಮನದುಂಬಿ ಆಲಿಸುತ್ತಾರೆ. ಕನ್ನಡದ ಮಹಾಪ್ರತಿಭೆ ಡಾ. ಶಿವರಾಮ ಕಾರಂತರು ತಮ್ಮ 'ಅಳಿದ ಮೇಲೆ' ಕಾದಂಬರಿಯಲ್ಲಿ ಹೇಳಿದ- “ನಮ್ಮೆಲ್ಲರ ಸಮಷ್ಟಿ ಬಾಳ್ವೆಗೆ ನಾವು ಸಲ್ಲಿಸಬೇಕಾದ ಋಣವೆಂದರೆ ಇದೇ ಖಂಡಿತ, ಅದೇ ಖಂಡಿತ ಎಂದು ಇನ್ನೊಬ್ಬರ ಗಂಟಲನ್ನು ಹಿಸುಕಿ ಅವರ ವಾಣಿಯನ್ನು ನಿರ್ಬಂಧಿಸದಿರುವುದು” ಎಂಬ ಮಾತು ನಮ್ಮಿಬ್ಬರ ಮಟ್ಟಿಗೆ ಸದಾ ನಿಜವಾಗುತ್ತಲೇ ಬಂದಿದೆ.

ಯಕ್ಷ ಪ್ರಭಾಕರ / 19