ವಿಷಯಕ್ಕೆ ಹೋಗು

ಪುಟ:ಯಕ್ಷ ಪ್ರಭಾಕರ.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀ ಪ್ರಭಾಕರ ಜೋಶಿಯವರ ಪ್ರತಿಭೆಗೆ ಹಲವು ಮುಖಗಳಿವೆ. ಅವರು ಶೇಣಿ, ಸಾಮಗ, ಪೆರ್ಲ ಪರಂಪರೆಗೆ ಸೇರಿದ ತಾಳಮದ್ದಳೆಯ ಸಮರ್ಥ ಅರ್ಥಧಾರಿ. ತಕ್ಕ ಇದಿರಾಳಿ, ಸರಿಯಾದ ಸಮಯ, ಸಂದರ್ಭ ಮತ್ತು ಪ್ರೇಕ್ಷಕರು ದೊರೆತಾಗ ಜೋಶಿಯವರ ಮಾತುಗಳು ಹೊಸ ಹೊಳಪು ಪಡೆದು, ಗಂಭೀರವಾದ ಕಡಲಿನ ಹಾಗೆ ಮೊರೆಯುವುದನ್ನು ನಾನು ಕಂಡಿದ್ದೇನೆ. ಪುರಾಣದ ಚೌಕಟ್ಟನ್ನು ಬೇಧಿಸದೆ, ಪಾತ್ರಗಳಿಗೆ ನವೀನ ಆಯಾಮ ನೀಡುವಲ್ಲಿ ಜೋಶಿಯವರು ಸಿದ್ಧಹಸ್ತರು. ಇಂಥದ್ದೇ ಕೆಲಸ ಮಾಡಿದ ಗಿರೀಶ ಕಾರ್ನಾಡರು ಇವತ್ತು ಅಂತಾರಾಷ್ಟ್ರೀಯ ಮಟ್ಟದ ಲೇಖಕ, ಆದರೆ ಜೋಶಿಯವರಿಗೆ ಅಂಥ ವಿಸ್ತಾರ ದೊರೆಯಲಿಲ್ಲ. ಅದಕ್ಕೆ ಅವರು ಕಾರಣರಲ್ಲ. ನೈಜ ಮತ್ತು ಸೃಜನಾತ್ಮಕ ಪ್ರತಿಭೆಯನ್ನು ಗುರುತಿಸಲಾಗದ ನಾವು ಕಾರಣ.
ಒಬ್ಬ ಶ್ರೇಷ್ಠ ಕಲಾವಿದನು ಅತ್ಯುತ್ತಮ ಲೇಖಕನೂ ಆಗಿರುವ ಉದಾಹರಣೆ ಬಹು ವಿರಳ. ಜೋಶಿಯವರು ಕಲಾವಿದನಾಗಿ ಯಕ್ಷಗಾನದ ಒಳ ಹೊರಗನ್ನು ಚೆನ್ನಾಗಿ ಬಲ್ಲವರು. ರಂಗದ ಮೇಲೆ, ಮತ್ತು ರಂಗದ ಹೊರಗೆ ಕಲಾವಿದರೊಡನೆ ಹಾಗೂ ಅಭಿಮಾನಿ ಗಳೊಡನೆ ಸರಸ ಸಂಭಾಷಣೆಯಲ್ಲಿ ತೊಡಗಬಲ್ಲವರು. ಉತ್ತರಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಅವರನ್ನು ಗೊತ್ತಿಲ್ಲದವರಿಲ್ಲ. ಸಣ್ಣ ದೊಡ್ಡ ಹೋಟೆಲುಗಳಲ್ಲಿ ಕೆಲಸ ಮಾಡುವವರೂ ಕೂಡಾ ಜೋಶಿಯವರನ್ನು ಕಂಡಾಗ ಸಂಭ್ರಮಿಸಿ,

ಸ್ವಾಗತಿಸಿ, ತಿಂಡಿ ತಿನ್ನಿಸಿ ಬೀಳ್ಕೊಳ್ಳುವುದುಂಟು.
ಸಾಮಾನ್ಯ ಜನರೊಡನೆ ಇಂಥ ಅಪೂರ್ವ ಸಂಬಂಧ ಸಾಧಿಸಿ ಕೊಂಡ ಡಾ. ಜೋಶಿಯವರೂ ವಿದ್ವತ್ ಲೋಕದಲ್ಲಿಯೂ ಪ್ರಸಿದ್ಧರು. ಅವರು ಬರೆದ ಕೃಷ್ಣ ಸಂಧಾನ, ಜಾಗರ, ಕೇದಗೆ, ಮಾರುಮಾಲೆ, ಪ್ರಸ್ತುತ, ವಾಗರ್ಥ, ಮುಡಿ, ಭಾರತೀಯ ತತ್ವಶಾಸ್ತ್ರ, ತತ್ವಮನನ ಮೊದಲಾದ ಕೃತಿಗಳು ಯಕ್ಷಗಾನ ಅಧ್ಯಯನಗಳಿಗೆ ಪ್ರೌಢತೆಯನ್ನೂ ಗಾಂಭೀರವನ್ನೂ ತಂದುಕೊಟ್ಟಿವೆ.
ಡಾ. ಪ್ರಭಾಕರ ಜೋಶಿಯವರು ಇತ್ತೀಚೆಗೆ 'ಕುಮಾರವ್ಯಾಸ ಭಾರತ ಮತ್ತು ಯಕ್ಷಗಾನ' ಎಂಬ ಒಂದು ಅತ್ಯಂತ ಮಹತ್ವದ ಸುದೀರ್ಘ ಲೇಖನವನ್ನು ಬರೆದಿದ್ದಾರೆ. ಈ ಲೇಖನದಲ್ಲಿ ಅವರು ಮಧ್ಯಕಾಲೀನ ಕನ್ನಡ ಕಾವ್ಯಗಳಾದ ನರಹರಿಯ ತೊರವೆ ರಾಮಾಯಣ, ಕುಮಾರ ವ್ಯಾಸನ ಕರ್ನಾಟಕ ಭಾರತ ಕಥಾಮಂಜರಿ, ಲಕ್ಷ್ಮೀಶನ ಜೈಮಿನಿ ಭಾರತ, ನಿತ್ಯಾತ್ಮ ಶುಕಯೋಗಿಯು ಕನ್ನಡ ಭಾಗವತ ಮೊದಲಾದುವು ಯಕ್ಷಗಾನ ಪ್ರಸಂಗಗಳ ಮೇಲೆ ಬೀರಿದ ಪರಿಣಾಮಗಳನ್ನು ಸಾಧಾರವಾಗಿ ಚರ್ಚಿಸುತ್ತದೆ. ಡಾ. ಜೋಶಿಯವರು ನಡುಗನ್ನಡ ಪಠ್ಯಗಳು ಹಾಗೂ ಯಕ್ಷಗಾನಗಳ ನಡುವಣ ಸಂಬಂಧಗಳ ಕುರಿತು ಈ ಮುಂದಿನಂತೆ ಹೇಳುತ್ತಾರೆ- 'ತಮಗೆ ಲಭ್ಯವಿದ್ದ ಒಂದೋ ಹಲವೋ ಮೂಲದಿಂದ ಕತೆಯನ್ನು ತೆಗೆದುಕೊಂಡು ಆ ಮೂಲದ ಆಶಯದೊಂದಿಗೆ ಪದ್ಯ ರೂಪದಲ್ಲಿ ಕತೆ ಹೇಳುವುದು ಹೆಚ್ಚಿನ ಪ್ರಸಂಗಗಳ ಕ್ರಮವಾಗಿದೆ. ಹಾಗಾಗಿ

20 / ಯಕ್ಷ ಪ್ರಭಾಕರ