ವಿಷಯಕ್ಕೆ ಹೋಗು

ಪುಟ:ಯಕ್ಷ ಪ್ರಭಾಕರ.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಲಕ್ಷ್ಮೀಶ ತೋಳ್ವಾಡಿ ಆಧ್ಯಾತ್ಮಿಕ ಚಿಂತಕರು
ಲಕ್ಷ್ಮೀಶ ತೋಳ್ವಾಡಿ
ಆಧ್ಯಾತ್ಮಿಕ ಚಿಂತಕರು

ಜೋಶಿ-ಮಿಶ್ರಮಂಡನೆ!


ಕಲೆಯನ್ನು ಪ್ರೀತಿಸುವುದೆಂದರೇನು ಎಂದು ಯಾರಾದರೂ ಕೇಳಿದರೆ, ನೀವು ಮಿತ್ರ ಪ್ರಭಾಕರ ಜೋಶಿಯವರನ್ನು ನೋಡಿ, ಅವರಲ್ಲೊಂದು ಮಾದರಿ ಸಿಗುತ್ತದೆ ಎಂದು ಉತ್ತರಿಸುವೆ. ಯಕ್ಷಗಾನವನ್ನು ಈ ಮಟ್ಟಿಗೆ ತಮ್ಮ ವ್ಯಕ್ತಿತ್ವದ ಭಾಗವಾಗಿ ಮಾಡಿಕೊಂಡವರುಂಟೇ ಎಂದು ಆಶ್ಚರ್ಯವಾಗುತ್ತದೆ. ಈ ತೆರದ ಪ್ರೀತಿ-ಆಸಕ್ತಿ-ತೊಡಗುವಿಕೆಗಳ ಕಾರಣದಿಂದಲೇ ತಮ್ಮ ಒಳಗಿನಶಕ್ತಿಗಳು ಪ್ರಕಟಗೊಳ್ಳುವುದಕ್ಕೆ ಜೋಶಿಯವರಿಗೆ ಯಕ್ಷಗಾನವೂ ಒಂದು ಪ್ರತೀಕದಂತೆ ಒದಗಿಬಂದಿದೆ!

ಯಕ್ಷಗಾನ ಸಂಘಗಳ ಕೂಟಗಳಲ್ಲಿ ಅರ್ಥಹೇಳುತ್ತ ಬೆಳೆದವರು ಅವರು. ಸಂಘಟನೆಯ ಕಷ್ಟ-ಸುಖಗಳನ್ನು ಸ್ವಾನುಭವದಲ್ಲಿ ಬಲ್ಲವರು. ಯಾವ ಕೆಲಸವನ್ನೂ ಚಿಕ್ಕದೆಂದುಕೊಂಡವರೇ ಅಲ್ಲ. ಕಲಾವಿದರ ಗುಣ-ವಿಗುಣ, ವಿಕ್ಷಿಪ್ತತೆ, ಪ್ರತಿಭಾವಿಲಾಸ, ಶ್ರೇಷ್ಠತೆ ಮತ್ತು ಅದು ಪ್ರಕಟಗೊಳ್ಳುವ ವಿಶಿಷ್ಟ ಪರಿಸ್ಥಿತಿ-ಪರಿಸರಗಳ ಆಯಕಟ್ಟಿನ ಗುರುತು-ಇವೆಲ್ಲವನ್ನೂ ವೇದಿಕೆಯ ಮೇಲಿನ ಮತ್ತು ಹೊರಗಿನ ನಿಕಟ ಒಡನಾಟದಿಂದಲೇ ಬಲ್ಲವರು, ಈ ಎಲ್ಲವನ್ನೂ ಕಲೆಯ ಆವರಣವೊಂದರ ಅಂಗವಾಗಿಯೇ ನೋಡಿದವರು. ಈ ನೋಟ ವಿಶೇಷ. ಹಿಮ್ಮೇಳದ ಕಲಾಪಗಳನ್ನು ತಾಂತ್ರಿಕವಾಗಿ ಬಲ್ಲವರು. ಪ್ರಸಂಗ ಪದ್ಯಗಳ “ನಡೆ”, ಕಲಾವಿದರ “ನಡೆ”, ಮೂಲಆಕರಗಳ “ಆಶಯಗಳನ್ನು ಅಭಿನಿವೇಶಗಳಿಗೆ ಅಷ್ಟಾಗಿ ಒಳಗಾಗದೆ ಉದಾರವಾಗಿ ಸಮನ್ವಯ ಮಾಡಬಲ್ಲವರು. ತಾಳಮದ್ದಳೆಯ ಕ್ಷೇತ್ರದಲ್ಲಿ ಸ್ವಯಂ ಮುಂಚೂಣಿಯ ಕಲಾವಿದರು. ಅದಕ್ಕಿಂತಲೂ ತುಸು ಹೆಚ್ಚೇ ಎನ್ನುವಂತೆ ಈ ಎಲ್ಲವನ್ನೂ ವಿಮರ್ಶಾತ್ಮಕವಾಗಿ ನೋಡಬಲ್ಲವರು. ವಿಮರ್ಶೆಯ ಸೂತ್ರಗಳನ್ನು

ಯಕ್ಷ ಪ್ರಭಾಕರ / 25