ವಿಷಯಕ್ಕೆ ಹೋಗು

ಪುಟ:ಯಕ್ಷ ಪ್ರಭಾಕರ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಲೆಯ ಒಟ್ಟು ವ್ಯವಹಾರದ ಒಳಗಿನಿಂದಲೇ ಎತ್ತಿಕೊಂಡವರು. ಈ ನಿಟ್ಟಿನಲ್ಲಿ ಹದವೂ, ಹೃದ್ಯವೂ ಆದ ವಿಮರ್ಶಾತ್ಮಕ ಗ್ರಂಥಗಳನ್ನು ಪ್ರಕಟಿಸಿದವರು. “ಸಾಹಿತ್ಯ” ಮತ್ತು “ದರ್ಶನಗಳ ಓದಿನಿಂದ ಪಡೆದುದನ್ನು ಉಚಿತವಾಗಿ ತಮ್ಮ ಪಾತ್ರಗಳಲ್ಲಿ ಬಳಸಬಲ್ಲವರು. ಬಹುಶ್ರುತರು. ಬಹುಶ್ರುತರಾಗಿಯೂ ಅಥವಾ ಆದುದರಿಂದಲೇ ತಮ್ಮ ಕಲಾವ್ಯವಹಾರದಲ್ಲಿ ಔಚಿತ್ಯಪ್ರಜ್ಞೆಗೆ ಗಾಸಿಯಾಗದಂತೆ ನೋಡಿಕೊಳ್ಳುವ ವಿವೇಕ ಇರುವವರು. ಆದುದರಿಂದಲೇ ಅವರ ವಿಮರ್ಶೆಯ ಮಾತುಗಳೂ ಒಂದು ಕಲಾವ್ಯವಹಾರದಂತೆಯೇ ಭಾಸವಾಗುವುದು.
ಕಲಾವಿದರನ್ನು ನಿಜವಾಗಿ ಪ್ರೀತಿಸುವವರು. ಅವರ ಕಲೆಯನ್ನು ಗುರುತಿಸಬಲ್ಲವರು. ಅದನ್ನು ಲೋಕಕ್ಕೆ ತಿಳಿಸಬಲ್ಲವರು. ಕಲಾವಿದರಿಗೆ ಅಭಿನಂದನೆಯ ಮಾತುಗಳನ್ನಾಡುವುದು ಒಂದು ಕಲಾ-ಕರ್ತವ್ಯವೆಂಬಂತೆ ಅದನ್ನು ಮಾಡಿದವರು. ತಮ್ಮ ಡಾಕ್ಟರೆಟ್ ಪ್ರಬಂಧಕ್ಕೆ ಯಕ್ಷಗಾನ ಪ್ರಸಂಗವನ್ನೇ ಆಯ್ದುಕೊಂಡವರು-ಇದು ಒಟ್ಟಂದದಲ್ಲಿ ಕರಾವಳಿಯ ಯಕ್ಷಗಾನವು ಕಡೆದ ಪ್ರಭಾಕರ ಜೋಶಿ ಎಂಬ ವ್ಯಕ್ತಿ ವಿಗ್ರಹ!
ಜೋಶಿಯವರು 'ಶೇಣಿ'ಯವರ ಆರಾಧಕರು. ಶೇಣಿಯವರಿಗೆ ಜೋಶಿ ಮಾಡಿದ ಸೇವೆ ಬಲು ದೊಡ್ಡದು. ಅಪೂರ್ವವಾದದ್ದು. ಬೇಂದ್ರೆಯವರಿಗೆ ಕುರ್ತಕೋಟಿಯವರಂತೆ, ಗೋಪಾಲಕೃಷ್ಣ ಅಡಿಗರಿಗೆ ಅನಂತಮೂರ್ತಿಯವರಂತೆ, ಶಿವರಾಮ ಕಾರಂತರಿಗೆ ಕು.ಶಿ.ಯವರಂತೆ- ಶೇಣಿಯವರಿಗೆ ಜೋಶಿ ಮಾಡಿದ ಸೇವೆ ಯಕ್ಷಗಾನ ಇತಿಹಾಸದ ಒಂದು

ಆರ್ದವಾದ ಭಾಗ. ಆದರೂ ವಿರಸದ ಕ್ಷಣಗಳು ಬಂದಿವೆ. ಸ್ವಾಭಿಮಾನಕ್ಕೆ ಗಾಸಿಯಾದಾಗ ಜೋಶಿ ಧೀರವಾಗಿ ವರ್ತಿಸಿದರು. ಈ ಧೈರ್ಯವನ್ನು ತೋರಿಸಿದ ಒಬ್ಬನೇ ಕಲಾವಿದ-ನನಗೆ ತಿಳಿದಿರುವಂತೆ-ಜೋಶಿಯವರು. ಆದರೂ ವೈಯಕ್ತಿಕವಾಗಿ ಶೇಣಿಯವರೊಡನೆ ಒಡನಾಟವನ್ನು ಜೋಶಿ ಬಿಡಲಿಲ್ಲ! ಕಲೆಯ ಮೇಲಿನ ಜೋಶಿಯವರ ಪ್ರೀತಿ ಅ-ವೈಯಕ್ತಿಕವಾದ್ದು. ಇದು ಅವರ ವಿಮರ್ಶೆಯ ವಿವೇಕದ ಉನ್ನತ ಫಲ. ಅನಂತಮೂರ್ತಿ- ಅಡಿಗರ ನಡುವೆಯೂ ಭಿನ್ನಾಭಿಪ್ರಾಯಗಳು ಬಂದಿದ್ದವು. ನನಗೆ ತಿಳಿದಿರುವಂತೆ, ಆಗಲೂ, ಶಿಷ್ಯನ ನಡೆನುಡಿಗಳೇ ಗುರುವಿಗಂತಲೂ ಉನ್ನತವಾಗಿದ್ದವು. ಕಾರಂತ-ಕು.ಶಿ.ನಡುವೆ ಹೇಳುವುದೇ ಬೇಡ. ತಾವು ಗಾಸಿಗೊಂಡರೂ, ಮೌನವಾಗಿದ್ದೇ, ಶಿಷ್ಯನು ಗುರುವನ್ನು ಒಂದು ಹಂತಕ್ಕಿಂತ ಕೆಳಗಿಳಿಯದಂತೆ ನೋಡಿಕೊಂಡರು. ಜೋಶಿಯವರೂ ಶೇಣಿಯವರ ಕೀರ್ತಿಧ್ವಜ ಕೆಳಗಿಳಿಯದಂತೆ ನೋಡಿಕೊಂಡರು. ಮೇಲ್ನೋಟಕ್ಕೆ ವೈಚಾರಿಕತೆ ವಿಮರ್ಶೆಗಳೇ ಪ್ರಧಾನವಾಗಿ ಕಾಣುವ ಅವರ ವ್ಯಕ್ತಿತ್ವದಲ್ಲಿ ಪರಮ ಭಾವುಕತೆ ಇದೆ. ಇದು ಜೋಶಿ!
ಇನ್ನೊಂದು ಅಂಶವನ್ನು ಕಾಣಿಸಿ ಈ ಲೇಖನ ಮುಗಿಸುವೆ. ಹೆಸರಾಂತ ವಿಮರ್ಶಕರಾದ ಕುರ್ತಕೋಟಿಯವರು, ತಮ್ಮೊಂದು ಲೇಖನದಲ್ಲಿ ಧಾರವಾಡದಲ್ಲಿ ತಾವು ಕೇಳಿದ ತಾಳಮದ್ದಳೆಯ ಕುರಿತು ಬರೆದರು. ಕುಮಾರವ್ಯಾಸನ ಭಕ್ತರಾದ ಕುರ್ತಕೋಟಿ, ಸಂಧಾನದ ಕೌರವನಾಗಿ ಶೇಣಿಯವರ ಅಪೂರ್ವವಾದ ವಾಗ್-ವಿನ್ಯಾಸವನ್ನು ಕೇಳಿ

26 / ಯಕ್ಷ ಪ್ರಭಾಕರ