ಪುಟ:ಯಶೋಧರ ಚರಿತೆ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೯೫

ಕಡಿದು ಕಿರಿಕಿರಿದನಲುವಂ
ಪುಡಿಗುಟ್ಟಿಸಿ ತೊವಲನುಗಿದು ಕರುಳ ತೊಡಂಕಂ
ಬಿಡಿಸಿ ನಡೆ ನೋಳ್ಪಿನೊಳಗೆ-
ಲ್ಲಡಗಿರ್ಪುದು ಜೀವನಿರ್ಪೊಡೆಲ್ಲಿಗೆ ಪೋದಂ೧೯


ಕುದಿರೊಳ್ ಕಳ್ಳನನಿಕ್ಕಿಸಿ-
ಸೊದೆಯಿಟ್ಟರೆ ಬಳಿದು ಬಳಿಕ ತೆರೆದೊಳಗಂ ನೋ-
ಡಿದೆನಾರ್ಮನಿಲ್ಲ ತನುವಿ-
ರ್ಪುದು ಬೇರೆಂಬಾತ್ಮನಂ ನೆಲಂ ನುಂಗಿದುದೋ೨೦


ತೂಗಿಸಿ ತೊಲೆಯೊಳ್ ಬಾಯಂ
ಮೂಗುಮನೊಡೆಯೊತ್ತಿ ಕೊಂದ ಕಳ್ಳನ ದೇಹಂ
ತೂಗಿದೊಡೆ ಕುಂದದಾತ್ಮವಿ-
ಭಾಗಂ ಬೇರೆಲ್ಲ ಜೀವನೆಂತುಂ ದೇಹಂ೨೧



೧೯. ಆತ್ಮನೆಲ್ಲಿ ಅಡಗಿದ್ದಾನೆಂದು ನೋಡಬೇಕೆಂದು ಒಂದು ಜೀವಿಯ ದೇಹವನ್ನು
ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ಎಲುಬನ್ನು ಹುಡಿಮಾಡಿ, ಚರ್ಮವನ್ನು
ಸುಲಿದು, ಕರುಳ ಸಿಕ್ಕನ್ನೆಲ್ಲ ಬಿಡಿಸಿ ಒಳಗೆಲ್ಲ ಪರೀಕ್ಷೆ ಮಾಡಿ ನೋಡಿದೆ. ಎಲ್ಲಿಯೂ ದೊರೆಯಲಿಲ್ಲ. ಆತ್ಮನಿದ್ದಾನೆಂದಾದರೆ ಅವನೆಲ್ಲಿಗೆ ಹೋದನು? ೨೦. ಒಬ್ಬ
ಕಳ್ಳನನ್ನು ಹಗೇವಿನಲ್ಲಿ ತಳ್ಳಿ ಮೇಲೆಲ್ಲ ಸುಣ್ಣವನ್ನು ಸುರಿದು ಬಳಿದು ಆಮೇಲೆ
ತೆರೆದು ನೋಡಿದೆ. ಒಳಗೆ ಎಲ್ಲಿಯೂ ಆತ್ಮನಿಲ್ಲ; ದೇಹ ಮಾತ್ರ ಎಲ್ಲಿಗೂ
ಹೋಗಲಿಲ್ಲ. ದೇಹಕ್ಕಿಂತ ಭಿನ್ನವೆನಿಸಿದ ಆ ಆತ್ಮನನ್ನು ನೆಲವು ನುಂಗಿತೇ?
೨೧. ಇನ್ನೊಬ್ಬ ಕಳ್ಳನನ್ನು ತಕ್ಕಡಿಯಲ್ಲಿಟ್ಟು ತೂಗಿದೆ. ಅನಂತರ ಅವನ ಮೂಗು
ಬಾಯಿಗಳನ್ನು ಬಲವಾಗಿ ಒತ್ತಿಟ್ಟು ಕೊಲೆ ಮಾಡಲಾಯಿತು. ಅನಂತರ ಅವನ
ದೇಹವನ್ನು ತೂಗಿ ನೋಡಿದಾಗ ತೂಕವೇನೂ ಕಡಿಮೆಯಾಗಲಿಲ್ಲ. ಎಂದ
ಮೇಲೆ ಆತ್ಮವೆಂಬ ಪ್ರತ್ಯೇಕ ವಿಭಾಗವೇ ಇಲ್ಲ. ದೇಹ ಮಾತ್ರ ಇರುತ್ತದೆ."