ಪುಟ:ಯಶೋಧರ ಚರಿತೆ.pdf/೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಯಶೋಧರ ಚರಿತೆ
೫೧
 

ಮುದುಗರಡಿಯ ಮದುದೊವಲಂ
ದದ ಕರಿಯಂ ತಾಳಕಾಯ ಮೋಳಿಗೆಯೊಂದಂ
ದದ ಮರುಡನಷ್ಟವಂಕಂ
ಮೊದಲೊಣಗಿದ ಕೂನಗೊರಡಿನಂದದ ಕೊಂಕಂ೪೦

ಎಂದೊಡೆ ದೂದವಿಗವಳಿಂ
ತೆಂದಳ್ ಗರಗರಿಕೆ ಕೊರಲೊಳೀಕ್ಷಣದೊಳ್ ವಾ
ರ್ಬಿಂದು ಮಿಡುಕೆರ್ದೆಯೊಳೊದವೆ ಪು
ಳಿಂದನ ಕಣೆ ನಟ್ಟು ನಿಂದ ವನಹರಿಣಿಯವೊಲ್೪೧

ಕರಿದಾದೊಡೆ ಕತ್ತುರಿಯಂ
ಮುರುಡಾದೊಡೆ ಮಲಯಜಂಗಳಂ ಕೊಂಕಿದೊಡೇಂ
ಸ್ಮರಚಾಪಮನಿಳಿಕಯ್ವೆರೆ
ಮರುಳೇ ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್೪೨


೪೦. ಮುದಿ ಕರಡಿಯ ಹಳೆಯ ಚರ್ಮದಂತೆ ಕಪ್ಪು ಕರಿಯಾಗಿದೆ ಅವನ
ದೇಹದ ಬಣ್ಣ. ತಾಳೆಯ ಮರದಂತೆ ಒರಟೊರಟಾದ ಶರೀರ, ಕಟ್ಟಿಗೆಯ
ಕಟ್ಟಿನಂತೆ ಅಂಕು ಡೊಂಕಾಗಿ ಅಷ್ಟಾವಕ್ರವಾಗಿದೆ.೩೬ ಎಂದೋ ಒಣಗಿಹೋದ
ವಕ್ರವಾದ ಒಂದು ಮರದ ಕೊರಡಿನಂತಿದೆ.” ೪೧. ದೂತಿ ಹೇಳಿದ ಇಷ್ಟು
ವಿಸ್ತೃವಾದ ವಿವರಣೆಯನ್ನು ಕೇಳುತ್ತಾ ಇದ್ದಂತೆ ಅಮೃತಮತಿಯ ಗಂಟಲು
ಗರಗರ ಎಂದು ಸದ್ದು ಮಾಡಿತು, ಕಣ್ಣಲ್ಲಿ ನೀರು ತುಂಬಿಕೊಂಡಿತು. ಎದೆ
ನಡುಗಿತು. ಕಾಡಿನ ಜಿಂಕೆಗೆ ಬೇಡನ ಬಾಣ ನಾಟಿದಂತೆ ಅವಳೊಮ್ಮೆ
ಸ್ತಂಭೀಭೂತಳಾದಳು. ಬಳಿಕ ಮೆಲ್ಲನೆ ಮಾತಿಗಾರಂಭಿಸಿದಳು. ೪೨. “ಕಸ್ತೂರಿಯ
ಬಣ್ಣ ಕಪ್ಪು. ಅದನ್ನು ಆ ಬಣ್ಣದಿಂದಾಗಿ ಕಡೆಗಾಣಿಸುವವರಿದ್ದಾರೆಯೆ ?
ಗಂಟುಗಂಟಾಗಿ ಇದೆಯೆಂದು ಗಂಧದ ಕೊರಡನ್ನು ತಿರಸ್ಕರಿಸುತ್ತಾರೆಯೇ?
ಕಾಮನ ಬಿಲ್ಲು ಕೊಂಕಾಗಿದ್ದರೂ ಅದನ್ನು ಯಾರೂ ಹೀನಯಿಸುವುದಿಲ್ಲವಲ್ಲ!
ಹುಚ್ಚೀ, ನಮ್ಮ ಮೆಚ್ಚಿನವರ ಮೆಯ್ಯಲ್ಲಿ ದೋಷವಿದ್ದರೆ ಅದೇ ಅವರ