ಪುಟ:ರಂಗಣ್ಣನ ಕನಸಿನ ದಿನಗಳು.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವಲಹಳ್ಳಿಯಲ್ಲಿ ಸಭೆ

೮೫

ಉಪಾಧ್ಯಾಯರು ಅಡಿಗೆಯ ಮನೆಯ ಸಮೀಪದಲ್ಲಿ ಎಲೆಗಳನ್ನು ಹಾಕಿಕೊಂಡು ಕುಳಿತರು. ಉಳಿದವರಿಗೆಲ್ಲ ಪಾಠ ಶಾಲೆಯ ಕಟ್ಟಡದಲ್ಲಿ ಎಲೆಗಳನ್ನು ಹಾಕಬಹುದೆಂದು ಆಲೋಚಿಸಿದ್ದರೆ ಉಪಾಧ್ಯಾಯರಲ್ಲಿ ಮೂವರು ಆದಿಕರ್ಣಾಟಕರಿದ್ದರು. ಆ ಉಪಾಧ್ಯಾಯರು ತಮಗೆ ಉತ್ತಮ ಜಾತಿಯವರೊಡನೆ ಸಹಪಂಕ್ತಿ ಭೋಜನ ಇಲ್ಲವೆಂಬುದನ್ನು ಮೊದಲೇ ತಿಳಿದುಕೊಂಡಿದ್ದರು. ಅವರು ರಂಗಣ್ಣನ ಬಳಿಗೆ ಬಂದು 'ಸ್ವಾಮಿ ! ನಾವು ಈ ಊರೊಳಗೆ ಬೇರೆ ಏರ್ಪಾಟು ಮಾಡಿಕೊಂಡಿದ್ದೇವೆ. ನಮ್ಮ ಜನ ಇದ್ದಾರೆ. ಅಪ್ಪಣೆ ಆದರೆ ಊಟ ಮಾಡಿ ಕೊಂಡು ಬರುತ್ತೇವೆ' ಎಂದರು. ರಂಗಣ್ಣ ಒಂದು ನಿಮಿಷ ಆಲೋಚನೆ ಮಾಡಿ ಅಡಿಗೆಯ ಮನೆಗೆ ಹೋಗಿ ದೊಡ್ಡ ಎಲೆಗಳಲ್ಲಿ ಚಿತ್ರಾನ್ನ ಮತ್ತು ಬೋಂಡಗಳನ್ನು ಕಟ್ಟಿಸಿ, ಪಾತ್ರೆಯೊಂದರಲ್ಲಿ ಪಾಯಸವನ್ನು ಹಾಕಿಸಿ ಉಪಾಧ್ಯಾಯರೊಬ್ಬರ ಕೈಯಲ್ಲಿ ತೆಗೆಸಿಕೊಂಡು ಬಂದನು. ಆ ಆದಿಕರ್ಣಾಟಕ ಉಪಾಧ್ಯಾಯರಿಗೆ ಅವುಗಳನ್ನು ಕೊಡಿಸಿ, ' ಮೇಷ್ಟೇ ! ನಿಮ್ಮ ಜನರ ಮನೆಯಲ್ಲಿ ಊಟ ಮಾಡಿ. ಜೊತೆಯಲ್ಲಿ ಇವುಗಳನ್ನೂ ಊಟ ಮಾಡಿ, ಮುಂದೆ ಒಳ್ಳೆಯ ಕಾಲ ಬರುತ್ತದೆ. ಆಗ ಈ ಭೇದಗಳೆಲ್ಲ ಹೋಗುತ್ತವೆ' ಎಂದು ಹೇಳಿ ಕೊಟ್ಟು ಕಳುಹಿಸಿದನು. ಆ ಉಪಾಧ್ಯಾಯರು, 'ಚಿಂತೆಯಿಲ್ಲ ಸ್ವಾಮಿ-ನಮಗೆ ಇದೆಲ್ಲ ರೂಢಿಯಾಗಿ ಹೋಗಿದೆ' ಎಂದು ಹೇಳಿ ಕೈ ಮುಗಿದು ಹೊರಟರು.

ಸದ್ಯ ಹೆಚ್ಚು ಗಲಭೆಯಿಲ್ಲದೆ ಈ ಪ್ರಕರಣ ಮುಗಿಯಿತೆಂದು ರಂಗಣ್ಣ ಹಿಂದಿರುಗುತ್ತಿದ್ದಾಗ ಇಬ್ಬರು ಉಪಾಧ್ಯಾಯರು- ದೊಡ್ಡ ದೊಡ್ಡ ನಾಮಗಳನ್ನು ಧರಿಸಿದವರು~ ಬಂದು ಕೈ ಮುಗಿದರು. 'ಏನು ಮೇಷ್ಟೆ ! ನಡೆಯಿರಿ ಊಟಕ್ಕೆ ಹೊರಡೋಣ ' ಎಂದು ರಂಗಣ್ಣನು ಹೇಳಿದನು.

' ಸಾರ್ ! ನಾವು ಇಲ್ಲಿ ಊಟ ಮಾಡುವುದಿಲ್ಲ. ನಾವು ಸ್ವಲ್ಪ ಬುತ್ತಿ ಕಟ್ಟಿಕೊಂಡು ಬಂದಿದ್ದೇವೆ' ಎಂದು ಅವರು ಹೇಳಿದರು.

ರಂಗಣ್ಣನು- ಇವನ್ಯಾರೋ ನಿಷ್ಠಾವಂತರಾದ ಐಯ್ಯಂಗಾರ್ ಮೇಷ್ಟರುಗಳಿರಬಹುದು, ನಲ್ಲಿ ನೀರು ಕುಡಿಯದೆ ಬಾವಿ ನೀರು ಕುಡಿಯುವ ಜನ. ಅವರ ಮಡಿ ಮತ್ತು ಆಚಾರಗಳಿಗೆ ನಾನೇಕೆ ಅಡ್ಡಿ