ಪುಟ:ರಂಗಣ್ಣನ ಕನಸಿನ ದಿನಗಳು.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೪

ರಂಗಣ್ಣನ ಕನಸಿನ ದಿನಗಳು

ಮಾಡುತ್ತಿದ್ದರು. ಹಿಂದಿನ ಇನ್ ಸ್ಪೆಕ್ಷನ್ನಿನ ವರದಿಗಳನ್ನು ತಾವು ನೋಡಿದ್ದೀರಿ. ಬರೆದಿರುವುದೆಲ್ಲ ಇಂಗ್ಲಿಷಿನಲ್ಲಿ. ನಮಗೆ ಆ ಭಾಷೆ ಬರುವುದಿಲ್ಲವೆಂದು ಸ್ವಾಮಿಯವರಿಗೆ ಗೊತ್ತು, ಅವರು ಏನು ಬರೆದಿದ್ದಾರೆಂಬುದನ್ನು ತಿಳಿದು ಕೊಳ್ಳುವುದಕ್ಕೆ ನಾವು ಜನಾರ್ದನಪುರಕ್ಕೋ ಮತ್ತೆಲ್ಲಿಗೋ ಹೋಗಿ ಇಂಗ್ಲಿಷ್ ತಿಳಿದವರಿಂದ ಓದಿಸಿ ಅರ್ಥ ಹೇಳಿಸಿಕೊಳ್ಳಬೇಕಾಗಿತ್ತು. ಸ್ವಾಮಿಯವರ ಕಾಲದಲ್ಲಿ ಅವುಗಳೆಲ್ಲ ತಪ್ಪಿವೆ. ಆರು, ಏಳು ಪುಟಗಳಷ್ಟು ಕನ್ನಡದಲ್ಲಿಯೇ ತಮ್ಮ ವರದಿಗಳನ್ನು ಬರೆದು ತಿದ್ದಿಕೊಳ್ಳಬೇಕಾದ ಅಂಶಗಳನ್ನು ನಮೂದಿಸಿರುತ್ತೀರಿ. ಇನ್ನು ಮುಂದೆ ಉಪಾಧ್ಯಾಯಯರು ತಪ್ಪು ಮಾಡುವುದಕ್ಕೆ ಅವಕಾಶ ಕಡಮೆ. ಆದ್ದರಿಂದ ಸಮಿತಿಯೇನೂ ಇಲ್ಲದೆ ತಾವೇ ನಮ್ಮನ್ನು ಕಾಪಾಡಿಕೊಂಡು ಬರಬೇಕು? ಎಂದು ಹೇಳಿಬಿಟ್ಟರು.

ಒಳ್ಳೆಯದು. ಶ್ರೀ ದೊಡ್ಡಬೋರೇಗೌಡರ ಔದಾರ್ಯದಿಂದ ಈ ದಿನ ನಿಮಗೆಲ್ಲ ಔತಣದ ಏರ್ಪಾಟಾಗಿದೆ. ಇನ್ನು ಭೋಜನಕ್ಕೆ ಸಿದ್ಧರಾಗೋಣ. ಮಧ್ಯಾಹ್ನ ಎರಡೂವರೆಯಿಂದ ಮೂರುವರೆವರೆಗೆ ಡ್ರಾಯಿಂಗ್, ಮಣ್ಣಿನ ಕೆಲಸ ಮತ್ತು ಇತರ ಕೈ ಕೆಲಸಗಳ ವಿಚಾರದಲ್ಲಿ ಟ್ರೈನಿಂಗ್ ಆಗಿಲ್ಲದ ಉಪಾಧ್ಯಾಯರಿಗೆ ತಿಳಿವಳಿಕೆ ಕೊಡಲಾಗುತ್ತದೆ. ಮೂರೂವರೆ ಗಂಟೆಯಿಂದ ಬಹಿರಂಗ ಸಭೆ ನಡೆಯುತ್ತದೆ' ಎಂದು ರಂಗಣ್ಣನು ಹೇಳಿ ಸಭೆಯನ್ನು ಮುಗಿಸಿದನು.

ಸ್ಥಳದ ಉಪಾಧ್ಯಾಯರೊಬ್ಬರು, ಅವನ ನೆಂಟನೊಬ್ಬನು ಮತ್ತು ಗೋಪಾಲ ಸೇರಿ ಆ ದಿನದ ಅಡಿಗೆಯನ್ನು ಮಾಡಿದ್ದರು. ಸಕ್ಕರೆಗುಂಬಳ ಕಾಯಿ ಹಾಕಿ ಬೇಳೆಹುಳಿ, ಹುರುಳಿಕಾಯಿಯ ಪಲ್ಯ, ಚಿತ್ರಾನ್ನ, ಬೋಂಡ ಮತ್ತು ಪಾಯಸ- ಆ ದಿನದ ಅಡಿಗೆ, ಅಡಿಗೆಯೆಲ್ಲ ಮುಗಿಯಿತೆಂದು ವರ್ತಮಾನ ಬರುತ್ತಲೂ ಎಲೆಗಳನ್ನು ಹಾಕುವುದಕ್ಕೆ ಪ್ರಾರಂಭಿಸಿದರು. ಆಗ ಆ ಊಟದ ಏರ್ಪಾಟಿನ ಬದನಾಮಿ ರಂಗಣ್ಣನಿಗೆ ತಿಳಿಯಿತು. ಏನೋ ಒಂದು ಉದಾತ್ತವಾದ ಧೈಯದಿಂದ ಕಾರ್ಯವೊಂದನ್ನು ಕೈಕೊಂಡರೆ ಉತ್ಸಾಹಭಂಗಮಾಡುವ ಸಂದರ್ಭಗಳು ಹೇಗೆ ಬಂದು ಕೂಡಿಕೊಳ್ಳುತ್ತವೆ ಎನ್ನುವುದು ಅವನ ಅನುಭವಕ್ಕೆ ಬಂದಿತು. ಬ್ರಾಹ್ಮಣ