ಪುಟ:ರಂಗಣ್ಣನ ಕನಸಿನ ದಿನಗಳು.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವಲಹಳ್ಳಿಯಲ್ಲಿ ಸಭೆ

೮೩

ಅತಿಕ್ರಮಿಸುತ್ತಲೂ ತಾತ್ಸಾರದಿಂದಲೂ ಕೆಲಸ ಮಾಡುತ್ತಿದಾರೆ. ಅವರನ್ನು ದಂಡಿಸುವ ಅಧಿಕಾರವನ್ನೇನೋ ಸರಕಾರದವರು ನನಗೆ ಕೊಟ್ಟಿದ್ದಾರೆ. ದಂಡನೆ ಮಾಡುವುದು ಯಾವಾಗಲೂ ಒಳ್ಳೆಯದಲ್ಲ. ಸೌಹಾರ್ದವನ್ನು ಕೆಡಿಸುತ್ತದೆ, ದ್ವೇಷವನ್ನು ಬೆಳೆಸುತ್ತದೆ. ಆದರೆ ಕರ್ತವ್ಯ ದೃಷ್ಟಿಯಿಂದ ದಂಡನೆಯನ್ನು ಮಾಡಲೇಬೇಕಾಗುತ್ತದೆ. ನಾನಾಗಿ ಮಾಡಿದರೆ ಇನ್ಸ್ಪೆಕ್ಟರ್ ಸಾಹೇಬರು ದಬ್ಬಾಳಿಕೆ ನಡೆಸುತ್ತಾರೆ ಎಂದು ಉಪಾಧ್ಯಾಯರು ದೂರುತ್ತಾರೆ. ಇದಕ್ಕಾಗಿ ನಾನೊಂದು ಆಲೋಚನೆ ಮಾಡಿದ್ದೇನೆ. ನೀವುಗಳೆಲ್ಲ ಒಪ್ಪುವಹಾಗಿದ್ದರೆ ಅದರಂತೆ ನಡೆಯಲು ನಾನು ಸಿದ್ಧನಾಗಿದ್ದೇನೆ. ನಿಮ್ಮ ಪ್ರತಿನಿಧಿಗಳಾಗಿ ನಾಲ್ಕು ಜನ ಉಪಾಧ್ಯಾಯರನ್ನು ಚುನಾವಣೆ ಮಾಡಿರಿ. ಅವರದೊಂದು ಸಮಿತಿ ಏರ್ಪಡಿಸೋಣ. ಅದಕ್ಕೆ ನಾನು ಅಧ್ಯಕ್ಷನಾಗಿರುತ್ತೇನೆ. ಆ ಸಮಿತಿಗೆ ಎಲ್ಲ ದಂಡನಾಧಿಕಾರವನ್ನೂ ಬಿಟ್ಟು ಕೊಡುತ್ತೇನೆ. ಉಪಾಧ್ಯಾಯರ ತಪ್ಪು ನಡತೆಯನ್ನೂ ಸಂಬಂಧಪಟ್ಟ ಕಾಗದಗಳನ್ನೂ ಸಮಿತಿಯ ಮುಂದೆ ಇಟ್ಟು, ಅಲ್ಲಿ ಆಗುವ ಬಹುಮತದ ತೀರ್ಮಾನದಂತೆ ನಡೆಯುತ್ತೇನೆ. ಅವರು ದಂಡನೆ ಮಾಡಕೂಡದು ಎಂದು ಹೇಳಿದರೆ ಮಾಡುವುದಿಲ್ಲ ; ಮಾಡಬೇಕು ಎಂದು ಹೇಳಿದರೆ ಮಾಡುತ್ತೇನೆ. ಈ ಸಲಹೆಯನ್ನು ಆಲೋಚನೆ ಮಾಡಿ- ಎಂದು ಹೇಳಿದನು. ಸ್ವಲ್ಪ ಚರ್ಚೆಗಳಾದ ನಂತರ ಉಪಾಧ್ಯಾಯರು, ' ಸ್ವಾಮಿ ! ಸಮಿತಿಯೇನೂ ಬೇಡ. ತಾವೇನೋ ಒಳ್ಳೆಯ ಸಲಹೆಯನ್ನೆ ಮಾಡಿದಿರಿ, ದಂಡನೆ ಮಾಡಬೇಕೆಂಬ ಅಭಿಲಾಷೆ ತಮಗಿಲ್ಲವೆಂಬುದು ಈ ರೇಂಜಿನ ಉಪಾಧ್ಯಾಯರಿಗೆಲ್ಲ ಗೊತ್ತು. ಆದರೆ ಈಗ ನಾವು ಯಾರಾದರೂ ತಪ್ಪು ಮಾಡಿದರೆ ಅದು ಆ ಉಪಾಧ್ಯಾಯರಿಗೆ ಮಾತ್ರ ಮತ್ತು ತಮಗೆ ಮಾತ್ರ ತಿಳಿದಿರುತ್ತದೆ. ಮುಂದೆ ಆ ತಪ್ಪು ಸಮಿತಿಗೆಲ್ಲ ತಿಳಿದು ಕಡೆಗೆ ಇತರರಿಗೂ ತಿಳಿದು ಉಪಾಧ್ಯಾಯರ ಮಾನ ಹೋಗುತ್ತದೆ. ಆದ್ದರಿಂದ ಏನಿದ್ದರೂ ಆ ತಪ್ಪುಗಳನ್ನು ದಯವಿಟ್ಟು ತಮ್ಮ ಹೊಟ್ಟೆಯಲ್ಲಿಯೇ ಇಟ್ಟು ಕೊಂಡು ನಮ್ಮನ್ನು ಕಾಪಾಡಿಕೊಂಡು ಬರಬೇಕು. ಮುಖ್ಯವಾಗಿ ಹೇಳುವುದಾದರೆ, ಹಿಂದಿನವರು ನಮಗೆ ಯಾವುದೆಂದು ತಿಳಿವಳಿಕೆಯನ್ನೂ ಕೊಡದೆ ಸುಮ್ಮನೆ ದಂಡನೆ