ಪುಟ:ರಂಗಣ್ಣನ ಕನಸಿನ ದಿನಗಳು.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೬

ರಂಗಣ್ಣನ ಕನಸಿನ ದಿನಗಳು

ಬರಲಿ ? ಪುಳಿಯೊಗರೆ ಕಟ್ಟಿ ಕೊಂಡು ಬಂದಿರಬಹುದು--- ಎಂದು ಆಲೋಚನೆ ಮಾಡಿದನು. ಆದರೂ ಬ್ರಾಹ್ಮಣರಲ್ಲೇ ಈ ಒಳ ಪಂಗಡಗಳೇಕೆ ? ಒಬ್ಬಿಬ್ಬರು ಐಯ್ಯಂಗಾರ್‌ ಬ್ರಾಹ್ಮಣರು ಅಡಿಗೆಯ ಮನೆಯ ಹತ್ತಿರ ಕುಳಿತಿದ್ದಾರಲ್ಲ, ಅವರ ಜೊತೆಯಲ್ಲಿ ಇವರು ಸಹ ಕುಳಿತುಕೊಳ್ಳ ಬಹುದಲ್ಲ - ಎಂಬುದಾಗಿ ಪುನಃ ಆಲೋಚನೆ ಮಾಡಿ, 'ಮೇಷ್ಟೆ ! ನೀವು ಅಡಿಗೆಯ ಮನೆಯ ಹತ್ತಿರ ನಿಮ್ಮ ಜನರೊಂದಿಗೆ ಕುಳಿತುಕೊಳ್ಳಬಹುದಲ್ಲ' ಎಂದು ಸಲಹೆ ಕೊಟ್ಟನು.

'ಸಾರ್ ! ನಾವು ವೆಂಕಟಾಪುರದ ವೈಷ್ಣವರು ! ನಾವು ಅವರ ಜೊತೆಯಲ್ಲಿ ಸೇರುವುದಿಲ್ಲ.'

ವೆಂಕಟಾಪುರದ ವೈಷ್ಣವರು ಎಂಬುವರು ಯಾರು ? ಎನ್ನುವುದು ರಂಗಣ್ಣನಿಗೆ ತಿಳಿಯದು. ಅಂತೂ ಯಾರೋ ಬಹಳ ಆಚಾರವಂತರು ಎಂದು ತೀರ್ಮಾನಿಸಿಕೊಂಡು, 'ಒಳ್ಳೆಯದು ಮೇಷ್ಟ್ರೇ! ನಿಮ್ಮ ಬುತ್ತಿಯಲ್ಲಿ ನನಗೂ ಸ್ವಲ್ಪ ಮಿಗಿಸಿರಿ !' ಎಂದು ನಗುತ್ತಾ ಹೇಳಿ ಕಳುಹಿಸಿಬಿಟ್ಟನು.

ಬಳಿಕ ಪಾಠಶಾಲೆಯ ಕಟ್ಟಡದಲ್ಲಿ ಏನು ಏರ್ಪಾಡಿದೆಯೋ ನೋಡೋಣವೆಂದು ಬರುತ್ತಿದ್ದಾಗ ಇಬ್ಬರು ಉಪಾಧ್ಯಾಯರು ಬಂದು, 'ಸ್ವಾಮಿ ! ನಾವು ವಿಶ್ವಕರ್ಮ ಜನಾಂಗ, ಇಲ್ಲಿ ನಾವು ಊಟ ಮಾಡುವುದಿಲ್ಲ.' ಎಂದು ಹೇಳಿದರು.

'ಹಾಗಾದರೆ, ಉಪವಾಸ ಇರುತ್ತಿರಾ ?'

'ಇನ್ನೇನು ಮಾಡುವುದು ಸಾರ್ ! ಏನಾದರೂ ಬಾಳೇಹಣ್ಣು ದೊರೆತರೆ ತೆಗೆದುಕೊಂಡು ತಿನ್ನುತ್ತೇವೆ.' ರಂಗಣ್ಣನಿಗೆ ಬಹಳ ವ್ಯಥೆಯಾಯಿತು. ಇಷ್ಟೊಂದು ಜನ ಔತಣದ ಭೋಜನ ಮಾಡುವಾಗ ಈ ಇಬ್ಬರು ಉಪಾಧ್ಯಾಯರು ಹಸಿದುಕೊಂಡು ಸಪ್ಪೆ ಮುಖಗಳನ್ನು ಮಾಡಿಕೊಂಡು ಕುಳಿತಿದ್ದರೆ ಹೇಗೆ ತಾನೆ ಇತರರು ಸಂತೋಷದಿಂದ ಇರಬಹುದು ? ಇದಕ್ಕೆ ಪರಿಹಾರವೇನು ? ಎಂದು ಆಲೋಚನೆ ಮಾಡಿ, 'ಮೇಷ್ಟ್ರೇ ! ನಾಲ್ಕು ಬೊಂಡಾಗಳನ್ನಾದರೂ ತಿನ್ನುತ್ತೀರಾ ? ನೀವು ಜನಾರ್ದನಪುರಕ್ಕೆ ಬಂದಾಗಲೋ ಬೆಂಗಳೂರಿಗೆ ಹೋದಾಗಲೋ ಹೋಟಲುಗಳಲ್ಲಿ ತಿಂಡಿ ತೆಗೆದುಕೊಳ್ಳುವುದುಂಟಷ್ಟೆ ?'