ಪುಟ:ರಂಗಣ್ಣನ ಕನಸಿನ ದಿನಗಳು.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವಲಹಳ್ಳಿಯಲ್ಲಿ ಸಭೆ

೮೭

ಎಂದು ಕೇಳಿದನು. ಆ ಮೇಷ್ಟರುಗಳು ಒಬ್ಬರ ಮುಖವನ್ನೊಬ್ಬರು ನೋಡುತ್ತ ನಿಂತುಕೊಂಡು ಕಡೆಗೆ, 'ಅಲ್ಲಿ ನಮ್ಮ ಜನರ ಹೋಟೆಲುಗಳಿವೆ ಸಾರ್ ! ಅಲ್ಲಿ ತಿಂಡಿ ತೆಗೆದುಕೊಳ್ಳುತ್ತೇವೆ. ಇಲ್ಲಿ ನಾವು ಬೋಂಡಾ ಸಹಾ ತಿನ್ನೋದಿಲ್ಲ ' ಎಂದು ಹೇಳಿಬಿಟ್ಟರು.

'ನೀವು ಉಪವಾಸ ಇರಬೇಡಿ ಮೇಷ್ಟ್ರೇ, ನಿಮಗೆ ಹಾಲೂ ಹಣ್ಣು, ಕಡಲೆಕಾಯಿ, ಪುರಿ ಮೊದಲಾದುವನ್ನು ಕೊಡಿಸುತ್ತೇನೆ' ಎಂದು ಹೇಳಿ ರಂಗಣ್ಣನು ಅವುಗಳ ವ್ಯವಸ್ಥೆ ಮಾಡಿದನು.

ಆ ಉಪಾಧ್ಯಾಯರು ಅತ್ತ ಹೊರಟರು. ಇತ್ತ ಪಾಠಶಾಲೆಯ ಕಟ್ಟಡದಲ್ಲಿ ಗಲಾಟೆಗೆ ಪ್ರಾರಂಭವಾಗಿ ಸ್ವಲ್ಪ ಮಾರಾಮಾರಿ ನಡೆಯುವುದಾಗಿ ರಂಗಣ್ಣನಿಗೆ ಕಂಡುಬಂತು. ಬೇಗ ಒಳಕ್ಕೆ ಹೋಗಿ, ' ಏನಿದು ಮೇಷ್ಟರ ಗಲಾಟೆ ! ಊಟದ ಹೊತ್ತಿನಲ್ಲಿ ಎಲ್ಲರೂ ಸಿಪಾಯಿಗಳಾಗಿ ಯುದ್ಧಕ್ಕೆ ನಿಂತಿದ್ದಿರಿ' ಎಂದು ಸ್ವಲ್ಪ ಗದರಿಸಿದನು. ಒಳಗಿನ ವಾತಾವರಣ ಸ್ವಲ್ಪ ಶಾಂತವಾಯಿತು. ಒಬ್ಬ ಮೇಷ್ಟು ಕೈ ಮುಗಿದು, 'ನೋಡಿ ಸ್ವಾಮಿ ! ನಾವು ಒಕ್ಕಲಿಗರು, ಈ ಉಪ್ಪಾರ ಮೇಷ್ಟ್ರು ನಮ್ಮ ಮಧ್ಯೆ ಬಂದು ಕುಳಿತುಕೊಂಡಿದ್ದಾರೆ. ಅವರು ಜಾತಿಯಲ್ಲಿ ಕೀಳು. ಆ ಮೇಷ್ಟರಿಗೆ, ಎದ್ದು ದೂರ ಹೋಗು ಎಂದರೆ ಆತ ಹೋಗುವುದಿಲ್ಲ.' - ಎಂದು ದೂರು ಹೇಳಿದನು.

'ಆಗಲಿ, ಎಲ್ಲರಿಗೂ ತಕ್ಕ ಏರ್ಪಾಟು ಮಾಡುತ್ತೇವೆ' ಎಂದು ರಂಗಣ್ಣನು ಹೇಳಿ ಕೆಲವರನ್ನು ಪಕ್ಕದ ಎರಡು ಕೊಠಡಿಗಳಿಗೆ ಹಂಚಿ ಮಧ್ಯದ ಹಾಲಿನಲ್ಲಿ ಒಕ್ಕಲಿಗ ಮೇಷ್ಟರುಗಳಿಗೆ ಸ್ಥಳವನ್ನು ಬಿಡಿಸಿದನು. ಅಷ್ಟಕ್ಕೆ ಆ ಪುರಾಣ ಮುಗಿಯಲಿಲ್ಲ. ಕೊಠಡಿಗಳಲ್ಲಿ, ' ಸಾರ್ ! ನಾವು ಈ ಮೇಷ್ಟು ಮುನಿಸಾಮಿಯನ್ನು ನಮ್ಮ ಜೊತೆಯಲ್ಲಿ ಸೇರಿಸುವುದಿಲ್ಲ' ಎಂದು ಗಲಭೆ ಎದ್ದಿತು. ಕಡೆಗೆ ರಂಗಣ್ಣ ಆಯಾ ಉಪಾಧ್ಯಾಯರ ಜಾತಿಗಳನ್ನು ವಿಚಾರಿಸಿ, ಗೋಡೆಗಿದ್ದ ಕಪ್ಪು ಹಲಗೆಗಳನ್ನೆಲ್ಲ ಇಳಿಸಿ ಮಧ್ಯದಲ್ಲಿ ಅಡ್ಡವಿಟ್ಟು, ಕುಂಬಾರರು, ಕುಂಚಟಿಗರು, ಉಪ್ಪಾರರು, ನಾಯಿಂದರು, ಬಣಜಿಗರು-ಮೊದಲಾದವರಿಗೆಲ್ಲ ಬೇರೆ ಬೇರೆ ಅಂಕಣಗಳನ್ನು ಏರ್ಪಡಿಸಿ ಅಲ್ಲಿಂದ ಹೊರಟನು, ದೇವರೇ ! ಈ ಜನಾಂಗ