ಪುಟ:ರಂಗಣ್ಣನ ಕನಸಿನ ದಿನಗಳು.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೮

ರಂಗಣ್ಣನ ಕನಸಿನ ದಿನಗಳು

ವನ್ನು ನೀನು ಹೇಗೆ ತಾನೆ ಉದ್ಧಾರ ಮಾಡುತ್ತಿರೋ ನನಗೆ ತಿಳಿಯದು. ಬ್ರಾಹ್ಮಣರು ಬ್ರಾಹ್ಮಣೇತರರು ಎಂಬ ಭೇದಭೂತವೊಂದು ದೇಶದಲ್ಲಿ ನಾಟ್ಯವಾಡುತ್ತಿದೆಯಲ್ಲ ! ಅದೆಂದಿಗೆ ತೊಲಗೀತೋ ಎಂದು ಹಾರೈಸುತ್ತಿದ್ದರೆ ಈ ಮರಿದೆವ್ವಗಳು ಅಸಂಖ್ಯಾತವಾಗಿ ತುಂಬಿ ಕೊಂಡಿವೆ. ಬೆಂಗಳೂರು ಮತ್ತು ಮೈಸೂರು ಪಟ್ಟಣಗಳಲ್ಲಿ ಭಾಷಣಗಳನ್ನೂ ಘೋಷಣೆಗಳನ್ನೂ ಮಾಡುವ ರಾಜಕೀಯ ಚಳವಳಿಗಾರರು ಮೊದಲು ಈ ಮರಿದೆವ್ವಗಳಿಗೆ ಮದ್ದು ಹುಡುಕಿದರೆ ಸಾಕು ; ದೇಶಕ್ಕೆ ದೊಡ್ಡ ಸೇವೆ ಮಾಡಿದ ಹಾಗಾಗುತ್ತದೆ. - ಎಂದು ಹೇಳಿಕೊಳ್ಳುತ್ತ ಭಗ್ನೋತ್ಸಾಹಿಯಾಗಿ ಹಿಂದಿರುಗಿದನು.

ಚಪ್ಪರದಲ್ಲಿ ಒಂದು ಕಡೆ ನಾಲ್ಕು ಜನ ಉಪಾಧ್ಯಾಯರ ಗುಂಪೊಂದು ಸೇರಿತ್ತು. 'ಈ ಮೇಷ್ಟರುಗಳು ಏನು ಮಸಲತ್ತು ಮಾಡುತ್ತಿದಾರೋ ! ಅವರು ಯಾವ ಜಾತಿಯೋ !' ಎಂದು ಕೊಂಡು ರಂಗಣ್ಣ ಅವರಲ್ಲಿಗೆ ಹೋದನು. ಆ ಗುಂಪಿನಲ್ಲಿದ್ದ ಬಸವಯ್ಯ ಎಂಬ ಮೇಷ್ಟು ಕೈ ಮುಗಿದು ಸ್ವಾಮಿಯವರಿಗೆ ಮೊದಲೇ ಗೊತ್ತಿದೆ. ನಾವೆಲ್ಲ ಲಿಂಗಾಯತರು. ಈ ಊರಲ್ಲಿ ನನ್ನ ನೆಂಟರು ಇದ್ದಾರೆ. ಅವರ ಮನೆಯಲ್ಲಿ ಊಟಕ್ಕೆ ಬರ ಹೇಳಿದ್ದಾರೆ, ಬಾರಪ್ಪ, ಊಟಕ್ಕೆ ಹೋಗೋಣ ಎಂದು ಕರೆದರೆ ಈ ರೇಣುಕಾರಾಧ್ಯ ಮೇಷ್ಟು ತಾನು ಅಲ್ಲಿಗೆ ಬರುವುದಿಲ್ಲ ಎಂದು ಹಟಮಾಡುತ್ತಿದ್ದಾನೆ. ಇದೊಂದು ಬಂಡಾಟ ಆಗಿದೆ. ಸ್ವಾಮಿಯವರು ಪರಿಹಾರ ಮಾಡಬೇಕು ? ಎಂದನು.

'ಅದೇಕೆ ಮೇಷ್ಟೆ ? ನೀವೆಲ್ಲ ಲಿಂಗಾಯತರು, ಒಂದು ಜನ. ಅವರು ವಿಶ್ವಾಸದಿಂದ ಊಟಕ್ಕೆ ಕರೆಯುವಾಗ ಹೋಗದೆ ಹಟ ಮಾಡುತ್ತೀರಿ, ಇದು ಚೆನ್ನಾಗಿಲ್ಲ, ”

'ನಾವು ಗುರುವರ್ಗದವರು ; ಆಚಾರ್ಯ ಸಂಪ್ರದಾಯದವರು ಸಾರ್ ! ಇವರದೆಲ್ಲ ಸಂಕರಜಾತಿ, ಬೇಕುಬೇಕೆಂದು ಈಗ ನನ್ನನ್ನು ಊಟಕ್ಕೆ ಕರೆಯುತ್ತಾರೆ. ನಾಳೆ ನಮ್ಮ ಮಠದವರಿಗೆ ತಿಳಿದರೆ ಅವರು ನನಗೆ ಬಹಿಷ್ಕಾರ ಹಾಕಿಬಿಡುತ್ತಾರೆ.'

ಬಸವಯ್ಯ ಮಧ್ಯೆ ಬಾಯಿ ಹಾಕಿ, 'ನಾವೇನೂ ಸಂಕರಜಾತಿ ಅಲ್ಲ