ಪುಟ:ರಂಗಣ್ಣನ ಕನಸಿನ ದಿನಗಳು.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವಲಹಳ್ಳಿಯಲ್ಲಿ ಸಭೆ

೮೯

ಸಾರ್ ! ನಮಗೂ ಅವರಿಗೂ ಭೇದ ಏನೂ ಇಲ್ಲ. ಈಚೆಗೆ ಇವರಿಗೆಲ್ಲ ಯಾರೋ ಹೇಳಿಕೊಟ್ಟಿದ್ದಾರೆ ; ಅದರ ಮೇಲೆ ತಾವೆಲ್ಲ ಬೇರೆ, ಗುರುವರ್ಗದವರು, ನಮಗಿಂತ ಹೆಚ್ಚು ಎಂದು ಹೇಳಿಕೊಳ್ಳುತ್ತಾರೆ' ಎಂದನು.

ರಂಗಣ್ಣನು 'ಮೇಷ್ಟೆ ! ನನಗೆ ಈ ಭೇದಗಳೊಂದೂ ಗೊತ್ತಿಲ್ಲ. ರೇಣುಕಾರಾಧ್ಯರನ್ನು ಬಲಾತ್ಕಾರ ಮಾಡಬೇಡಿ. ಸಂತೋ ಷವಾಗಿ ಬಂದರೆ ಕರೆದು ಕೊಂಡು ಹೋಗಿ. ಇಲ್ಲವಾದರೆ ಬಿಟ್ಟು ಬಿಡಿ. ಇಲ್ಲಿ ಜಾತಿ ಮತ್ತು ಮತಗಳ ವ್ಯಾಜ್ಯ ಮಾತ್ರ ಬೇಡ' ಎಂದು ಹೇಳಿ ನಿಟ್ಟುಸಿರು ಬಿಟ್ಟನು.

ಕಡೆಗೆ ಆ ಮೂವರು ಉಪಾಧ್ಯಾಯರು ಊಟಕ್ಕೆ ಹೋದರು ; ರೇಣುಕಾರಾಧ್ಯರೊಬ್ಬರೇ ಉಳಿದರು. ರಂಗಣ್ಣನು ಅವರನ್ನು ನೋಡಿ, ಮೇಷ್ಟೇ ! ನೀವು ಗುರುವರ್ಗದವರು ; ಉತ್ತಮ ಜಾತಿ. ನಾನು ಬ್ರಾಹ್ಮಣ ; ಉತ್ತಮ ಜಾತಿ. ನನ್ನ ಜೊತೆಯಲ್ಲಿ ಕುಳಿತುಕೊಂಡು ಊಟ ಮಾಡುತ್ತೀರಾ ? ಊಟ ಮಾಡುವ ಹಾಗಿದ್ದರೆ ಬನ್ನಿ ಹೋಗೋಣ ? ಎಂದು ಕರೆದನು.

'ಇಲ್ಲ ಸಾರ್, ನಾವು ಬ್ರಾಹ್ಮಣರ ಜೊತೆಯಲ್ಲಿ ಊಟ ಮಾಡುವುದಿಲ್ಲ. ಬಾಹ್ಮಣರು ಭವಿಗಳು.

'ಭವಿಗಳು ಎಂದರೇನು ಮೇಷ್ಟೆ ? ನಾವು ನಿಮಗಿಂತ ಕೀಳು ಜಾತಿಯೇ ?

'ನನಗೆ ಗೊತ್ತಿಲ್ಲ ಸಾರ್, ನೀವು ಲಿಂಗವನ್ನು ಕಟ್ಟುವುದಿಲ್ಲ. ನಾವು ಇಷ್ಟಲಿಂಗ ಕಟ್ಟಿದ್ದೆವೆ.?'

ರಂಗಣ್ಣನಿಗೆ ದಿಕ್ಕು ತೋರಲಿಲ್ಲ. ಆ ಮೇಷ್ಟು ಉಪವಾಸವಿರುತ್ತಾನಲ್ಲ ಎಂಬುದೊಂದೇ ವ್ಯಥೆ.'

'ಹಾಗಾದರೆ ಏನು ಮಾಡುತ್ತೀರಿ ಮೇಷ್ಟೆ ?'

'ನಮ್ಮ ಹಳ್ಳಿ ಇಲ್ಲಿಗೆ ಎರಡು ಮೈಲಿ ದೂರ ಇದೆ ಸಾರ್, ಅಪ್ಪಣೆ ಆದರೆ ಮನೆಗೆ ಹೋಗಿ ಊಟ ಮಾಡಿಕೊಂಡು ಮಧ್ಯಾಹ್ನ ಎರಡು ಗಂಟೆಗೆಲ್ಲ ಬರುತ್ತೇನೆ.'

'ಸಂತೋಷ ಮೇಷ್ಟೆ! ಊಟಕ್ಕೆ ಹೊರಡಿ, ಅನುಕೂಲವಾದರೆ ಮಧ್ಯಾಹ್ನದ ಸಭೆಗೆ ಬನ್ನಿ. ಇಲ್ಲವಾದರೆ ಮನೆಯಲ್ಲೇ ಇರಿ. ನಿಮಗೆ ಮಧ್ಯಾಹ್ನ ರಜ ಕೊಟ್ಟಿದ್ದೇನೆ.'