ಪುಟ:ರಂಗಣ್ಣನ ಕನಸಿನ ದಿನಗಳು.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವಲಹಳ್ಳಿಯಲ್ಲಿ ಸಭೆ

೯೧

ಒತ್ತಾಯ ಮಾಡಿದರು. ಆದರೆ ರಂಗಣ್ಣ ಒಪ್ಪಲಿಲ್ಲ. ಬಡಿಸುವಾಗ ಏನು ಗಲಭೆಗಳಾಗುತ್ತವೆಯೋ ? ಎಂಬುದೊಂದು ದೊಡ್ಡ ಹೆದರಿಕೆ ಅವನಿಗೆ, ಒತ್ತಾಯ ಮಾಡಿ ಪ್ರಯೋಜನವಿಲ್ಲವೆಂದು ಉಪಾಧ್ಯಾಯರು ಸುಮ್ಮನಾದರು. ಬಡಿಸುವುದಕ್ಕೆ ಇಬ್ಬರು ಉಪಾಧ್ಯಾಯರೂ, ಆ ನಾಲ್ವರು ಉಪಾಧ್ಯಾಯಿನಿಯರೂ ಸಿದ್ಧರಾದರು. ರಂಗಣ್ಣನದು ಮೇಲ್ವಿಚಾರಣೆ, ಇನ್ನು ಹೆಚ್ಚು ಹೇಳಬೇಕಾದುದಿಲ್ಲ. ಎಲ್ಲರಿಗೂ ಪುಷ್ಕಳವಾಗಿ ಮೃಷ್ಟಾನ್ನ ಭೋಜನ ಆಯಿತು, ಮೊದಲಿನಲ್ಲಿ ಸ್ವಲ್ಪ ತೊಂದರೆ ತಿಸರುಗಳಿದ್ದರೂ ಮುಕ್ತಾಯದಲ್ಲಿ ಸುಖ ಸಂತೋಷಗಳೇ ತುಂಬಿದ್ದುವು. ಊಟವಾದ ಮೇಲೆ ಆಯಾ ಜಾತಿಯವರು ತಾವು ಕುಳಿತಿದ್ದ ಎಡೆಗಳನ್ನು ತಾವು ತಾವೇ ಜೊಕ್ಕ ಮಾಡಿ ಕೈ ತೊಳೆದುಕೊಂಡು ಬಂದು ಚಪ್ಪರದಲ್ಲಿ ಹಾಕಿದ್ದ ಜಮಖಾನದ ಮೇಲೆ ಕುಳಿತರು.

ಈ ಕಡೆ ರಂಗಣ್ಣ ಮತ್ತು ಉಳಿದಿದ್ದ ಉಪಾಧ್ಯಾಯರೂ ಉಪಾಧ್ಯಾಯಿನಿಯರೂ ತಂತಮ್ಮ ಊಟಗಳನ್ನು ಮುಗಿಸಿಕೊಂಡು ಚಪ್ಪರದಲ್ಲಿ ಹಾಜರಾದರು. ಇಷ್ಟೆಲ್ಲ ಮುಗಿಯುವ ಹೊತ್ತಿಗೆ ಮಧ್ಯಾಹ್ನ ಒಂದು ಗಂಟೆಯಾಯಿತು. ಅಲ್ಲಿ ತಾಂಬೂಲ ಚರ್ವಣ, ಸ್ವಲ್ಪ ಸಲಿಗೆಯ ಮತ್ತು ಹಾಸ್ಯ ಪ್ರವೃತ್ತಿಯ ಉಪಾಧ್ಯಾಯರು, ' ಸಾರ್ ! ತಮ್ಮ ಕೈಯೆಲ್ಲ ಸುಣ್ಣವಾಗಿ ಹೋಗುತ್ತೆ. ನಾವು ಸುಣ್ಣ ಹಚ್ಚಿ ಎಲೆ ಮಡಿಸಿ ಕೊಡುತ್ತೇವೆ' ಎಂದು ಹೇಳಿದರು. ಒಬ್ಬ ಮೇಷ್ಟು ಇನ್‌ಸ್ಪೆಕ್ಟರವರ ಕೈಯಲ್ಲಿ ಅಡಿಕೆಯ ಪುಡಿಯನ್ನು ಹಾಕಿದನು; ಮತ್ತೊಬ್ಬನು ವೀಳೆಯದೆಲೆಯ ತೊಟ್ಟುಗಳನ್ನು ತೆಗೆದು ಹದವಾಗಿ ಸುಣ್ಣ ಹಚ್ಚಿ ಮಡಿಸಿಕೊಟ್ಟನು. ಅವುಗಳನ್ನು ಇನ್ ಸ್ಪೆಕ್ಟರ್ ಸಾಹೇಬರು ಸ್ವೀಕರಿಸಿ ಚರ್ವಣ ಮಾಡುತ್ತಿದ್ದಾಗ, ಮತ್ತೊಂದು ಕಡೆಯಿಂದ ಮೇಷ್ಟ್ರು ಬಂದು, 'ಈ ಬೀಡ ನಾನು ತಯಾರಿಸಿದ್ದು ; ಇದರ ರುಚಿ ಪರಾಂಬರಿಸಬೇಕು ಸ್ವಾಮಿಯವರು '- ಎಂದು ಕಾಣಿಕೆ ಕೊಟ್ಟನು. ಮತ್ತೊಬ್ಬ ಮೇಷ್ಟ್ರು, 'ಬೀಡ ಮಾಡುವುದರಲ್ಲೇನು ಸಾರ್ ಚಮತ್ಕಾರ ? ಅಂಗಡಿಯವರೆಲ್ಲ ಮಾಡಿಡುತ್ತಾರೆ. ನಾನು ಬಾಳೆಯಗಿಡ ಮಾಡಿಕೊಡುತ್ತೇನೆ' ಎಂದು ಹೇಳಿ ಅರ್ಧ ನಿಮಿಷದಲ್ಲಿ ವೀಳೆಯದೆಲೆಗೆ ಸುಣ್ಣ ಹಚ್ಚಿ ಅದನ್ನು ಮಡಿಸಿ ಬಾಳೆಯ ಗಿಡವನ್ನು ಮಾಡಿ ಇನ್ ಸ್ಪೆಕ್ಟರಿಗೆ