ಪುಟ:ರಂಗಣ್ಣನ ಕನಸಿನ ದಿನಗಳು.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೨

ರಂಗಣ್ಣನ ಕನಸಿನ ದಿನಗಳು

ಕೊಟ್ಟನು. ರಂಗಣ್ಣನಿಗೆ ಅವರ ಸಲಿಗೆಯನ್ನೂ ಕೈಚಳಕವನ್ನೂ ನೋಡಿ ಬಹಳ ಸಂತೋಷವಾಯಿತು, ಅಲ್ಲಿಯೇ ಸಮೀಪದಲ್ಲಿ ಮುನಿಸಾಮಿ ಕುಳಿತಿದ್ದ. ಅವನನ್ನು ನೋಡುತ್ತಲೂ ಇನ್ಸ್ಪೆಕ್ಟರಿಗೆ ಬಹಳ ನಗು ಬಂದಿತು. ಯಾರಿಗೂ ಕಾರಣ ತಿಳಿಯದು. ಸ್ವಲ್ಪ ನಗುವನ್ನು ತಡೆದುಕೊಂಡು, 'ಏನು ಮೇಷ್ಟೆ ! ಏನಾಯಿತು ? ಶ್ಯಾನುಭೋಗರು ಏನು ಹೇಳಿದರು ?' ಎಂದು ಕೇಳಿದನು. ' ಸಾರ್ ! ತಾವು ಹೇಳಿದ ಸಲಹೆ ಬಹಳ ಚೆನ್ನಾಗಿದೆ. ಆಗಿ ಹೋಯಿತು ಸಾರ್ ಗುಡಿಸಿಲು ಮೇಲೆ ಹುಲ್ಲು ಹೊಚ್ಚುವುದೊಂದೇ ಉಳಿದಿದೆ. ಅದರ ಆರಂಭೋತ್ಸವ ಮಾಡಬೇಕೆಂದು ಶ್ಯಾನುಭೋಗರು ಹೇಳಿದ್ದಾರೆ. ಖಂಡಿತ ತಮ್ಮನ್ನು ಕರೆದು ಕೊಂಡು ಬರಬೇಕೆಂದು ಹೇಳಿದ್ದಾರೆ. ಸ್ವಾಮಿಯವರನ್ನು ನೋಡುವುದಕ್ಕೆ ಶ್ಯಾನುಭೋಗರೂ ಕಮಿಟಿ ಮೆಂಬರುಗಳೂ ಜನಾರ್ದನ ಪುರಕ್ಕೆ ಬರುತ್ತಾರೆ.'

'ಖರ್ಚಿನ ಬಾಬತು ಹೇಗೆ ?'

'ಕಮಿಟಿ ಮೆ೦ಬರುಗಳೆ ಚಂದಾ ಹಾಕಿಕೊಂಡರು ಸಾರ್! ಆವರಿಗೇನ್ ಸಾರ್, ಎಲ್ಲರೂ ನೆಮ್ಮದಿ ಕುಳ.?'

ರಂಗಣ್ಣನಿಗೆ ಆ ಸಮಾಚಾರ ತಿಳಿದುದರಿಂದ ಮತ್ತೂ ಸಂತೋಷವಾಯಿತು, ಆ ಮಾತು ಈ ಮಾತು ಆಡುತ್ತ ಹರಟೆಗಳಲ್ಲಿ ಎರಡೂವರೆ ಗಂಟೆ ಹತ್ತಿರವಾಯಿತು. ಬೆಳಗ್ಗೆ ಸೂಚನೆ ಕೊಟ್ಟಿದ್ದಂತೆ ಉಪಾಧ್ಯಾಯರಿಗೆ ಮಣ್ಣಿನ ಕೆಲಸ, ಕಾಗದ ಮಡಿಸುವುದು ಮೊದಲಾದುವುಗಳಲ್ಲಿ ಒಂದು ಗಂಟೆಯ ಕಾಲ ಶಿಕ್ಷಣವನ್ನು ಕೊಡಲಾಯಿತು ಮಧ್ಯಾಹ್ನ ಮೂರೂವರೆ ಗಂಟೆಗೆ ಬಹಿರಂಗ ಸಭೆ ಸೇರಿತು.

ಚಪ್ಪರದಲ್ಲಿ ಹಳ್ಳಿಯಲ್ಲಿನ ಗಂಡಸರು ಹೆಂಗಸರು ನೂರಾರು ಜನ ಸೇರಿಬಿಟ್ಟ ರು. ದೊಡ್ಡ ಬೋರೇಗೌಡರೂ ಬಂದರು. ಮೊದಲಿನಂತೆಯೇ ಅವರನ್ನು ರಂಗಣ್ಣ ತನ್ನ ಪಕ್ಕದಲ್ಲಿ ಕುರ್ಚಿಯಲ್ಲಿ ಕುಳ್ಳಿರಿಸಿಕೊಂಡನು. ದೇವತಾ ಪ್ರಾರ್ಥನೆ ಎರಡು ನಿಮಿಷಗಳ ಕಾಲ ಆಯಿತು. ಆಮೇಲೆ ಕುಮಾರವ್ಯಾಸನ ಭಾರತದಿಂದ ಅರ್ಧ ಗಂಟೆಯ ಕಾಲ ವ್ಯಾಖ್ಯಾನದೊಂದಿಗೆ ವಾಚನ ನಡೆಯಿತು. ತರುವಾಯ ಹದಿನೈದು ನಿಮಿಷಗಳ ಕಾಲ