ಪುಟ:ರಂಗಣ್ಣನ ಕನಸಿನ ದಿನಗಳು.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವಲಹಳ್ಳಿಯಲ್ಲಿ ಸಭೆ

೯೩

ಉಪಾಧ್ಯಾಯರೊಬ್ಬರು ನಕಲಿ ಮಾಡಿದರು. ಇದಾದಮೇಲೆ ಇಪ್ಪತ್ತು ನಿಮಿಷಗಳ ಕಾಲ ಮಿಡಲ್ ಸ್ಕೂಲಿನ ಮುಖ್ಯೋಪಾಧ್ಯಾಯರು ' ಸಹಕಾರ ಸಂಘಗಳಿಂದ ಆಗುವ ಪ್ರಯೋಜನಗಳು' ಎಂಬ ವಿಷಯವನ್ನು ಕುರಿತು ಭಾಷಣ ಮಾಡಿದರು, ತರುವಾಯ ಹದಿನೈದು ನಿಮಿಷಗಳ ಕಾಲ ಉಪಾಧ್ಯಾಯರ ಗೋಷ್ಟಿಯಿಂದ ಸಂಗೀತ ನಡೆಯಿತು. ಅಧ್ಯಕ್ಷರ ಮುಕ್ತಾಯ ಭಾಷಣ ಬಂತು. ಆಗ ರಂಗಣ್ಣನು, ' ಬೆಳಗ್ಗೆ ನಾನು ಉಪಾಧ್ಯಾಯರನ್ನು ಕುರಿತು ನಾಲ್ಕು ಮಾತುಗಳನ್ನು ಹೇಳಿದೆ. ಈಗ ಗ್ರಾಮಸ್ಥರನ್ನು ಕುರಿತು ನಾಲ್ಕು ಮಾತುಗಳನ್ನು ಹೇಳಬೇಕೆಂಬ ಬಯಕೆ ಇದೆ, ಈ ದಿನ ನನಗೂ ನನ್ನ ಈ ಉಪಾಧ್ಯಾಯ ಮಂಡಲಿಗೂ ಆಗಿರುವ ಸಂತೋಷವನ್ನು ಬಾಯಿಮಾತಿನಿಂದ ಹೇಳಲು ಸಾಧ್ಯವೇ ಈ ದಿನದ ಕಾರ್ಯಕ್ರಮಗಳೆಲ್ಲ ದೇವರ ದಯೆಯಿಂದ ಸಾಂಗವಾಗಿ ನೆರವೇರಿವೆ. ನನ್ನ ಮಿತ್ರರಾದ ಶ್ರೀ ದೊಡ್ಡ ಬೋರೇಗೌಡರ ಔದಾರ್ಯದಿಂದ ನಮ್ಮೆಲ್ಲರಿಗೂ ಮೃಷ್ಟಾನ್ನ ಭೋಜನವೂ ಲಭಿಸಿತು. ಆದರೆ ಈ ಸಭೆಗಳನ್ನು ಏರ್ಪಡಿಸುವ ಉದ್ದೇಶ ಬರಿ ಊಟಮಾಡುವ ಸಲುವಾಗಿ ಅಲ್ಲ, ಈ ದಿನ ಬೆಳಗ್ಗೆ ನೀವುಗಳೆಲ್ಲ ನೋಡಿದಂತೆ ಉಪಾಧ್ಯಾಯರಿಗೆ ಬೋಧನಕ್ರಮಗಳ ವಿಚಾರದಲ್ಲಿ ತಿಳಿವಳಿಕೆಯನ್ನೂ ಮಧ್ಯಾಹ್ನ ದಲ್ಲಿ ಕೈ ಕೆಲಸಗಳಲ್ಲಿ ಶಿಕ್ಷಣವನ್ನೂ ಕೊಡಲಾಯಿತು. ಇವುಗಳನ್ನೆಲ್ಲ ಏರ್ಪಾಟು ಮಾಡಿರುವುದು ತಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ನಡೆಯಲಿ ಎಂಬ ದೊಡ್ಡ ಉದ್ದೇಶದಿಂದ, ಸದ್ಯದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಚೆನ್ನಾಗಿ ನಡೆಯುತ್ತಿಲ್ಲ. ಸರಕಾರದವರು ಹಣವನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ತಕ್ಕಷ್ಟು ಫಲ ದೊರೆಯುತ್ತಿಲ್ಲ. ನೀವುಗಳೆಲ್ಲ ಆಲೋಚನೆ ಮಾಡಿ : ಒಂದು ಎಕರೆ ಗದ್ದೆಗೆ ನೀವು ಮೂವತ್ತು ರೂಪಾಯಿಗಳವರೆಗೂ ಖರ್ಚು ಮಾಡಿ ಅದರಿಂದ ಇಪ್ಪತ್ತು ರೂಪಾಯಿಗಳ ವರಮಾನ ಪಡೆದರೆ ನಿಮಗೆ ವ್ಯಥೆಯಾಗುವುದಿಲ್ಲವೆ ? ಅದಕ್ಕೆ ಬದಲು ನೂರು ರೂಪಾಯಿ ವರಮಾನ ಬಂದರೆ ನಿಮಗೆ ಸಂತೋಷವಾಗುವುದಿಲ್ಲವೆ? ಮುಂದೆ ಸರಕಾರದವರು ಮಾಡಬೇಕಾದ ಕೆಲಸಗಳೇನೋ ಬಹಳವಿವೆ. ನಮ್ಮ ದೇಶದಲ್ಲಿ ವಿದ್ಯಾಭ್ಯಾಸ ಚೆನ್ನಾಗಿ ಪ್ರಚಾರವಾಗಬೇಕಾದರೆ