ಪುಟ:ರಂಗಣ್ಣನ ಕನಸಿನ ದಿನಗಳು.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೪

ರಂಗಣ್ಣನ ಕನಸಿನ ದಿನಗಳು

ಫೈಮರಿ ಸ್ಕೂಲುಗಳು ಹದಿನೈದು ಸಾವಿರ ಆದರೂ ಇರಬೇಕು ; ಮಿಡಲ್ ಸ್ಕೂಲುಗಳು ಸಾವಿರದ ಐನೂರು ಆದರೂ ಸ್ಥಾಪಿತವಾಗಬೇಕು ; ಹೈಸ್ಕೂಲುಗಳು ಐನೂರು ಆದರೂ ಆಗಬೇಕು. ವಿಶ್ವವಿದ್ಯಾನಿಲಯದ ಮಾತನ್ನು ನಾನು ಆಡುವುದಿಲ್ಲ, ನಮ್ಮ ಇಲಾಖೆಯ ಮಾತನ್ನು ಆಡುತ್ತೇನೆ. ಸಾವಿರ ಮತ್ತು ಅದಕ್ಕೆ ಹೆಚ್ಚಿನ ಪ್ರಜಾ ಸಂಖ್ಯೆಯುಳ್ಳ ಪ್ರತಿಯೊಂದು ಗ್ರಾಮದಲ್ಲಿಯೂ ಒಂದೊಂದು ಮಿಡಲ್ ಸ್ಕೂಲು ಇರಬೇಕು. ಅದಕ್ಕೆ ಸಮಾಜದಲ್ಲಿ ಹುಡುಗರನ್ನು ಒದಗಿಸತಕ್ಕೆ ಹತ್ತು ಹನ್ನೆರಡು ಪ್ರೈಮರಿಸ್ಕೂಲುಗಳು ಸುತ್ತಲೂ ಇರಬೇಕು, ಆಗ ವಿದ್ಯಾಭ್ಯಾಸ ಚೆನ್ನಾಗಿ ನಡೆಯುತ್ತದೆ. ಈ ವ್ಯವಸ್ಥೆಗೆಲ್ಲ ಮೂರು ಕೋಟಿ ರೂಪಾಯಿಗಳನ್ನಾದರೂ ನಾವು ಖರ್ಚು ಮಾಡಬೇಕಾಗುತ್ತದೆ. ಆ ಕಾಲ ಯಾವಾಗ ಬರುವುದೋ ದೇವರಿಗೇ ಗೊತ್ತು. ಈಗ ನಮ್ಮ ದೇಶದಲ್ಲಿ ನೂರು ಜನಕ್ಕೆ ಹನ್ನೆರಡು ಜನ ಮಾತ್ರ ಓದು ಬರೆಹ ಬಲ್ಲವರು. ಪಾಶ್ಚಾತ್ಯ ದೇಶಗಳಲ್ಲಿ ನೂರಕ್ಕೆ ತೊಂಬತ್ತೆದು, ತೊಂಬತ್ತೆಂಟು ಜನ ಓದು ಬರೆಹ ಬಲ್ಲವರು.'

'ಸದ್ಯದಲ್ಲಿರುವ ಅನುಕೂಲಗಳನ್ನು ಗ್ರಾಮಸ್ಥರು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕಾದುದು ಅವರ ಕರ್ತವ್ಯ, ಉಪಾಧ್ಯಾಯಯರ ವಿಚಾರವನ್ನು ನನಗೆ ಬಿಟ್ಟು ಬಿಡಿ. ಅವರನ್ನು ತಿದ್ದುವ ಮತ್ತು ಅವರಿಂದ ಕೆಲಸ ತೆಗೆಯುವ ಜವಾಬ್ದಾರಿ ನನಗೆ ಸೇರಿದ್ದು, ನೀವುಗಳು ಸಹ ಉಪಾಧ್ಯಾಯರನ್ನು ಗೌರವದಿಂದಲೂ ಪ್ರೇಮದಿಂದಲೂ ನೋಡಿಕೊಂಡರೆ ಅವರು ಸಂತೋಷವಾಗಿ ಕೆಲಸ ಮಾಡುತ್ತಾರೆ. ಈ ದಿನ ಇಲ್ಲಿ ಸೇರಿರುವ ಉಪಾಧ್ಯಾಯರು ಗ್ರಾಮಸ್ಥರ ವಿಷಯದಲ್ಲಿ ಕೃತಜ್ಞತೆಯಿಂದ ತುಂಬಿದ್ದಾರೆ. ಈ ದಿನದ ಆದರಾತಿಥ್ಯಗಳಿಗೆ ಹೇಗೆ ತಾನೆ ಪ್ರತ್ಯುಪಕಾರ ಮಾಡಬಹುದು ? ಗ್ರಾಮಸ್ಥರ ಮಕ್ಕಳಿಗೆಲ್ಲ ಚೆನ್ನಾಗಿ ಪಾಠ ಹೇಳಿಕೊಟ್ಟು ತಿಂದ ಬೋಂಡಗಳನ್ನು ಜೀರ್ಣಿಸಿಕೊಳ್ಳಬೇಕಾಗಿದೆ ಎಂದು ಅವರು ಆಲೋಚನೆ ಮಾಡುತ್ತಿದಾರೆ. ಉಂಡ ಮನೆಗೆ ಎರಡು ಬಗೆಯುವುದುಂಟೆ ? ಈಗ ಉಪಾಧ್ಯಾಯರಿಲ್ಲ ನವಚೈತನ್ಯ ಹುಟ್ಟಿದೆ ; ಅವರಲ್ಲಿ ಉತ್ಸಾಹ ಹೊರಸೂಸುತ್ತಿದೆ. ಅವರು ಹಿಂದಿನಿಗಿಂತ ಮುಂದೆ ಚೆನ್ನಾಗಿ ಕೆಲಸ ಮಾಡುತ್ತಾರೆ. ನೀವುಗಳು ನಾನು ಹೇಳುವುದನ್ನು ಸ್ವಲ್ಪ ಗಮನಿಸಿ.'