ಪುಟ:ರಂಗಣ್ಣನ ಕನಸಿನ ದಿನಗಳು.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವಲಹಳ್ಳಿಯಲ್ಲಿ ಸಭೆ

೯೫

ಮಕ್ಕಳನ್ನು ಪಾಠಶಾಲೆ ತೆರೆದ ಒಂದು ತಿಂಗಳೊಳಗಾಗಿ ಸೇರಿಸಿಬಿಡಿ, ಆಮೇಲೆ ಪಾಠಶಾಲೆಗೆ ಸೇರಿಸಬೇಕೆಂದು ಕರೆದುಕೊಂಡು ಹೋಗಬೇಡಿ, ಮೇಷ್ಟರಿಗೆ ಒತ್ತಾಯ ಮಾಡ ಬೇಡಿ. ಇದು ನಮ್ಮ ನಿಯಮಗಳಿಗೆ ವಿರೋಧವಾದುದು ; ಮತ್ತು ಇತರ ಮಕ್ಕಳ ವಿದ್ಯಾಭಿವೃದ್ಧಿಗೆ ಕುಂದಕ ತರುವಂಥದು. ಆಲೋಚನೆಮಾಡಿ : ನೀವು ಬಿತ್ತನೆ ಮಾಡುವಾಗ ಅಥವಾ ನಾಟಿ ಮಾಡುವಾಗ ಈ ತಿಂಗಳು ಒಂದಿಷ್ಟು, ಮುಂದಿನ ತಿಂಗಳು ಇನ್ನಷ್ಟು, ಮರುದಿಂಗಳು ಮತ್ತಿಷ್ಟು - ಹೀಗೆ ಪ್ರತಿ ತಿಂಗಳಲ್ಲಿ ಬಿತ್ತನೆ ಆಥವಾ ನಾಟಿ ಮಾಡುತ್ತಿರಾ ? ಏಕೆ ಮಾಡುವುದಿಲ್ಲ ? ಹಾಗೆಯೇ ನಮ್ಮ ಪಾಠ ಶಾಲೆಗಳಲ್ಲಿ ಕೂಡ

ಎರಡನೆಯದಾಗಿ, ಮಕ್ಕಳನ್ನು ಚೊಕ್ಕಟವಾಗಿ ಪ್ರತಿದಿನವೂ ಪಾಠ ಶಾಲೆಗೆ ಕಳಿಸಿಕೊಡಿ. ಹೆಣ್ಣು ಮಕ್ಕಳನ್ನು ಚೊಕ್ಕಟವಾಗಿ ಕಳಿಸುತ್ತೀರಿ. ಆ ಮಕ್ಕಳು ಬಾಚಿ ಕೊ೦ಡು ಹೆರಳು ಹಾಕಿಕೊಂಡು ಮುದ್ದು ಮುದ್ದಾಗಿ ಪಾಠ ಶಾಲೆಗೆ ಬರುತ್ತವೆ. ಹುಡುಗರು ಅರೆ ಬೆತ್ತಲೆಯಲ್ಲಿ, ಸರಿಯಾದ ಉಡುಪುಗಳಿಲ್ಲದೆ, ಹಲ್ಲುಜ್ಜದೆ, ಮುಖ ತೊಳೆಯದೆ, ಹಾಗೆಯೇ ಬಂದು ಕುಳಿತುಕೊಳ್ಳುತ್ತಾರೆ. ಇದು ಸರಿಯಲ್ಲ.”

ಮೂರನೆಯದಾಗಿ, ಹುಡುಗರಿಗೆ ಸ್ಲೇಟು ಪುಸ್ತಕಗಳನ್ನು ತೆಗೆದುಕೊಡಬೇಕು. ಈ ವಿಚಾರದಲ್ಲಿ ನನ್ನದೊಂದು ಸಲಹೆ ನೀವು ಪಾಠ ಶಾಲೆಗೆ ಸ್ಟೇಟುಗಳನ್ನೂ ಪುಸ್ತಕಗಳನ್ನೂ ದಾನಮಾಡಿ, ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತೇವೆ. ದಾನಮಾಡಿದ ಮಹನೀಯರ ಹೆಸರುಗಳನ್ನು ಪಟ್ಟಿಯಲ್ಲಿ ಬರೆದು ಪ್ರಕಟಿಸುತ್ತೇವೆ ; ಇಲಾಖೆಯವರ ಗಮನಕ್ಕೆ ಅವರ ಹೆಸರುಗಳನ್ನು ತರುಸುತ್ತೇವೆ. ಈ ದಾನದಿಂದ ಬಹಳ ಪ್ರಯೋಜನವಿದೆ. ಪ್ಲೇಟುಗಳನ್ನೂ ಪುಸ್ತಕಗಳನ್ನೂ ಪಾಠಶಾಲೆಯಲ್ಲಿ ಉಳಿಸಿಕೊಂಡು ನಿಮ್ಮ ಮಕ್ಕಳು ಬಂದಾಗ ಬರೆಯುವುದಕ್ಕೂ ಓದುವುದಕ್ಕೂ ಉಪಾಧ್ಯಾಯರು ಕೊಡುತ್ತಾರೆ. ಆಮೇಲೆ ಪೆಟ್ಟಿಗೆಯಲ್ಲಿ ಭದ್ರವಾಗಿ ತೆಗೆದಿಡುತ್ತಾರೆ. ಒಂದು ಬಾರಿ ಕೊಂಡು ಹೀಗೆ ಇಟ್ಟರೆ ಎರಡು ವರ್ಷಕಾಲವಾದರೂ ಅವು ಬಾಳಿಕೆ ಬರುತ್ತವೆ, ನಿಮಗೆ ಪದೇ ಪದೇ ಖರ್ಚುಮಾಡುವ ಕಷ್ಟ ತಪ್ಪುತ್ತದೆ. ಯಾರಾದರೂ ದಾನಮಾಡುತ್ತೀರಾ?