ಪುಟ:ರಂಗಣ್ಣನ ಕನಸಿನ ದಿನಗಳು.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೬

ರಂಗಣ್ಣನ ಕನಸಿನ ದಿನಗಳು

ಈ ದಿನ ಶುಭದಿನ, ಇದೇ ಶುಭ ಮುಹೂರ್ತ....' ಎಂದು ಹೇಳುತ್ತಿದ್ದಾಗ ದೊಡ್ಡ ಬೋರೇಗೌಡರು, ' ಸ್ವಾಮಿ ! ನಾನು ಇವತ್ತು ಪ್ಲೇಟು, ಐವತ್ತು ಮೊದಲನೆಯ ಪುಸ್ತಕ, ಇಪ್ಪತ್ತು ಎರಡನೆಯ ಪುಸ್ತಕ ಕೊಡುತ್ತೇನೆ' ಎಂದು ಎದ್ದು ನಿಂತುಕೊಂಡು ಹೇಳಿದರು. ಸಭೆಯಲ್ಲೆಲ್ಲ ಕರತಾಡನ ಗಳೂ ಜಯಘೋಷಗಳೂ ತುಂಬಿ ಹೊದವು. ಐದು ನಿಮಿಷಗಳಲ್ಲಿ ಏಳೆಂಟು ಜನ ವಾಗ್ದಾನಮಾಡಿದರು. ಪಾಠ ಶಾಲೆಗೆ ನೂರು ಸ್ಲೇಟುಗಳು ಮತ್ತು ಬೇಕಾದಷ್ಟು ಪಠ್ಯ ಪುಸ್ತಕಗಳು, ಒಂದು ಮೈಸೂರು ಮ್ಯಾಪು ಒಂದು ಇಂಡಿಯಾ ಮ್ಯಾಪು ದೊರೆತುವು.

ರಂಗಣ್ಣನು ಆ ದಾತೃಗಳಿಗೆಲ್ಲ ಉಚಿತ ರೀತಿಯಲ್ಲಿ ವಂದನೆಗಳನ್ನರ್ಪಿಸಿ, ಇನ್ನು ಕೆಲವು ಹಿತೋಕ್ತಿಗಳನ್ನಾಡಿ ತನ್ನ ಅಧ್ಯಕ್ಷ ಭಾಷಣವನ್ನು ಮುಗಿಸಿದನು.

ದೊಡ್ಡ ಬೋರೇಗೌಡರು ವಂದನಾರ್ಪಣೆ ಮಾಡಿದರು. ಅವರು ದೊಡ್ಡ ವಿದ್ಯಾವಂತರಲ್ಲದಿದ್ದರೂ ಲೌಕಿಕದಲ್ಲಿ ಚೆನ್ನಾಗಿ ನುರಿತವರಾದ್ದರಿ೦ದ ಬಹಳ ಚೆನ್ನಾಗಿ ಮಾತನಾಡಿದರು. ಆ ದಿನದ ಕಾರ್ಯಕಲಾಪಗಳನ್ನು ಪ್ರಶಂಸೆಮಾಡಿ, ಉಪಾಧ್ಯಾಯರಿಗೂ ಗ್ರಾಮಸ್ಥರಿಗೂ ಸೌಹಾರ್ದ ಬೆಳೆಯುವುದಕ್ಕೆ ಹೀಗೆ ಸಭೆಗಳನ್ನು ಗ್ರಾಮಾಂತರಗಳಲ್ಲಿ ಏರ್ಪಡಿಸುವುದು ಒಳ್ಳೆಯದೆಂದು ಅನುಮೋದಿಸಿದರು. ಹೀಗೆ ಇಬ್ಬರನ್ನೂ ಕಲೆ ಹಾಕಿ, ಆ ಎರಡೆತ್ತುಗಳ ಮೇಲೂ ಆ ಸೌಹಾರ್ದದ ನೊಗವನ್ನು ಹೊರಿಸಿ, ಬಂಡಿಯಲ್ಲಿ ಮಕ್ಕಳನ್ನು ಕೂಡಿಸಿ ತಾವೇ ಸಾರಧಿಯಾಗಿ ನಡೆಸುತ್ತಿರುವ ಇನ್ಸ್ ಸ್ಪೆಕ್ಟರ್‌ ಸಾಹೇಬರವರಿಗೆ ತಾವುಗಳೆಲ್ಲ ಕೃತಜ್ಞರಾಗಿರುವುದಾಗಿ ಹೇಳಿ ದರು. ಆಮೇಲೆ ರಂಗಣ್ಣನಿಗೆ ತಾವೇ ಒಂದು ಒಳ್ಳೆಯ ಹೂವಿನ ಹಾರವನ್ನು ಹಾಕಿದರು.

ರಂಗಣ್ಣ ದೊಡ್ಡ ಬೋರೇಗೌಡರಿಗೆ ತಾನು ವಿಶೇಷವಾದ ರೀತಿಯಲ್ಲಿ ಮರ್ಯಾದೆ ಮಾಡಬೇಕೆಂದು ಏರ್ಪಾಟು ಮಾಡಿಕೊಂಡಿದ್ದನು. ಅವರ ಕೊರಳಿಗೆ ತಾನು ಸಿದ್ಧಪಡಿಸಿಕೊಂಡಿದ್ದ ಹೂವಿನ ಹಾರವನ್ನು ಹಾಕಿ ಹಸ್ತಲಾಘವ ಕೊಟ್ಟನು. ಆ ಬಳಿಕ ' ಕಾಯೌ ‌ಶ್ರೀ ಗೌರಿ' ಮತ್ತು ಜಯ ಘೋಷಗಳಿಂದ ಸಭೆ ಮುಕ್ತಾಯವಾಯಿತು,