ಪುಟ:ರಂಗಣ್ಣನ ಕನಸಿನ ದಿನಗಳು.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಿಮ್ಮರಾಯಪ್ಪನ ಬುದ್ಧಿವಾದ

೧೦೭

ಕಾಣಿಸುವವರು ಇಬ್ಬರೇ, ದಿವಾನರೊಬ್ಬರು, ಮಹಾರಾಜರಾಜರೊಬ್ಬರು. ಉಳಿದವರು ಅವನ ಗಣನೆಯಲ್ಲೇ ಇಲ್ಲ. ನಿನ್ನನ್ನು ಅವನು ಲಕ್ಷ್ಯದಲ್ಲಿಡುತ್ತಾನೆಯೇ ? ನಿನ್ನ ಕಾಗದಕ್ಕೆ ಅವನು ಉತ್ತರವನ್ನೇನೂ ಕೊಡುವುದಿಲ್ಲ, ಒಂದು ವಾರ ಬಿಟ್ಟು ಕೊಂಡು ಮರ್ಯಾದೆಯಾಗಿ ಒಂದು ಜ್ಞಾಪಕ ಕೊಡು. ಅದಕ್ಕೂ ಅವನು ಲಕ್ಷ್ಯ ಕೊಡುವುದಿಲ್ಲ. ಒಂದು ವಾರ ಪುನಃ ಬಿಟ್ಟು ಕೊಂಡು- ಈ ಬಾರಿ ರಿಜಿಸ್ಟರ್ ಮಾಡಿ- ಕಾಗದ ಹಾಕು, ಮೊದಲೆರಡು ಕಾಗದಗಳ ನಕಲನ್ನು ಒಳಗಿಡು. ಅದಕ್ಕೆ ಜವಾಬೇನಾದರೂ ಬರುತ್ತದೆಯೋ, ಯಾರ ಹತ್ತಿರವಾದರೂ ಹೇಳಿ ಕಳಿಸುತ್ತಾನೆಯೋ ನೋಡು. ಏನೂ ಫಲ ಕಾಣದಿದ್ದರೆ ಮತ್ತೊಂದು ರಿಜಿಸ್ಟರ್ಡ್ ಕಾಗದ ಹಾಕು. ಆಮೇಲೆ ನನ್ನ ಹತ್ತಿರ ಬಾ, ಮುಂದೆ ಮಾಡಬೇಕಾದ್ದನ್ನು ಹೇಳಿಕೊಡುತ್ತೇನೆ. ಈ ಮಧ್ಯೆ ಆ ಮನುಷ್ಯ ಎದುರು ಬಿದ್ದರೆ ನಿನ್ನ ಕೋಪಗೀಪ ತೋರಿಸಿಕೊಳ್ಳ ಬೇಡ ನಗುನಗುತ್ತಾ ಯೋಗಕ್ಷೇಮ ವಿಚಾರಿಸು. ದಿವಾನರ ಹತ್ತಿರ ಏನಾದರೂ ಶಿಫಾರಸು ಮಾಡಬೇಕೆಂದು ಹೇಳು.'

'ನನಗೆ ಅವನ ಶಿಫಾರಸು ಗಿಫಾರಸು ಬೇಕಿಲ್ಲ. ಉಳಿದ ಸಲಹೆಗಳಂತೆ ನಡೆಯುತ್ತೇನೆ. ಇನ್ನೊಂದು ವಿಷಯವನ್ನು ನಿನ್ನೊಡನೆ ನಾನು ಪ್ರಸ್ತಾಪ ಮಾಡಬೇಕು ?'

'ಏನದು ? ಹೇಳು. ಬಹಳ ಫಜೀತಿಯಲ್ಲಿ ಸಿಕ್ಕಿಕೊಂಡಿರುವ ಹಾಗೆ ಕಾಣುತ್ತದೆಯಲ್ಲ.'

'ಫಜೀತಿ ಏನೂ ಅಲ್ಲ. ನಾನಾಗಿ ಮಾಡಿಕೊಂಡದ್ದೂ ಅಲ್ಲ, ಆ ಮುಖಂಡರು ಅಂತ ಇರುತ್ತಾರಲ್ಲ ! ಅವರ ಅಪ್ರಾಮಾಣಿಕತೆಯಿಂದ ನಮಗೆ ಗಂಟುಬೀಳುವ ಪ್ರಸಂಗಗಳು.'

'ಮತ್ತಾವ ಮುಖಂಡ ? ಒಬ್ಬನದ೦ತೂ ಆಯಿತು. ಆ ಕರಿಯಪ್ಪನೂ ನಿನಗೆ ಎದುರು ಬಿದ್ದಿದ್ದಾನೆಯೋ ?'

'ಈಗ ನನಗೆ ಎದುರೇನೂ ಬಿದ್ದಿಲ್ಲ. ಮುಂದೆ ಬೀಳುತ್ತಾನೋ ಏನೋ ತಿಳಿಯದು.?'