ಪುಟ:ರಂಗಣ್ಣನ ಕನಸಿನ ದಿನಗಳು.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೧೨

ಮೇಷ್ಟ್ರು ವೆಂಕಟಸುಬ್ಬಯ್ಯ

ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು. ಕರಿಯಪ್ಪನವರ ಅಣ್ಣನ ಮಗನ ವಿಚಾರದಲ್ಲಿ ಸಾಹೇಬರಿಗೆ ಬರೆದು ಹಾಕಿದ್ದಕ್ಕೆ ಆ ಹುಡುಗನ ಸ್ಕಾಲರ್ ಷಿಪ್ಪನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕೆಂದೂ, ಇನ್ನೂ ಹೆಚ್ಚು ತನಿಖೆ ಮಾಡಿ ವಿವರಗಳನ್ನು ತಿಳಿಸಬೇಕೆಂದೂ ಅವರಿಂದ ಆಜ್ಞೆ ಬಂತು. ಹಿಂದಿನ ಸಾಹೇಬರಾಗಿದ್ದಿದ್ದರೆ ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಇತ್ತೀಚೆಗೆ ಬಂದವರು ರೂಲ್ಸು ಗೀಲ್ಸು ಎಂದು ಕೂಗಾಡಿ ಅವುಗಳಂತೆ ನಡೆಯುವವರಾಗಿದ್ದರು ; ಮತ್ತು ಉಪಾಧ್ಯಾಯರುಗಳನ್ನು ದಂಡಿಸುವುದರಲ್ಲಿಯೂ ಇನ್ ಸ್ಪೆಕ್ಟರುಗಳನ್ನು ಬಯ್ಯುವುದರಲ್ಲಿಯೂ ಬಹಳ ಹೆಸರು ಪಡೆದಿದ್ದರು. ಸಾಲದುದಕ್ಕೆ ಆ ಅಧಿಕಾರಿಗಳು ಮಾಡುವ ದಂಡನೆಯ ಪ್ರಮಾಣವನ್ನು ಅನುಸರಿಸಿ ಅವರ ದಕ್ಷತೆಯನ್ನು ಅಳೆಯುವ ಕಾಲವಾಗಿತ್ತು. ಅದರ ಪರಿಣಾಮವಾಗಿ ಅಧಿಕಾರಿಗಳಲ್ಲಿ ಸ್ಪರ್ಧೆ ಏರ್ಪಟ್ಟು ಹೈಸ್ಕೂಲು ಮತ್ತು ಮಿಡಲ್ ಸ್ಕೂಲು ಉಪಾಧ್ಯಾಯರುಗಳಲ್ಲಿ ದಂಡನೆಯನ್ನು ತಪ್ಪಿಸಿಕೊಂಡವರು ಬಹಳ ಅಪೂರ್ವವಾಗುತ್ತ ಬಂದರು. ಇನ್ನು ಪ್ರೈಮರಿ ಸ್ಕೂಲು ಉಪಾಧ್ಯಾಯರುಗಳ ವಿಚಾರವನ್ನು ಏಕೆ ಹೇಳಬೇಕು ! ಆ ಭಯಂಕರ ಕಾಲದಲ್ಲಿ ಇಲಾಖೆಗೆ ಬಹಳ ಹಣ ಉಳಿತಾಯವಾಯಿತೆಂದು ವೃತ್ತಪತ್ರಿಕೆಗಳಲ್ಲೆಲ್ಲ ಪ್ರಕಟವಾಗಿದ್ದುವು. ಹೀಗೊಂದು ನವೀನ ವಾತಾವರಣ ತಲೆದೋರಿದ್ದುದರಿಂದ ರಂಗಣ್ಣನ ಹೊಸ ಸಾಹೇಬರು ಹುಡುಗನ ಸ್ಕಾಲರ್ ಷಿಪ್ಪನ್ನು ನಿಲ್ಲಿಸಿ, ಹೆಚ್ಚಿನ ವಿವರಗಳನ್ನು ತಿಳಿಸಬೇಕೆಂದು ಅಪ್ಪಣೆ ಮಾಡಿದ್ದರು.