ಪುಟ:ರಂಗಣ್ಣನ ಕನಸಿನ ದಿನಗಳು.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೨

ರಂಗಣ್ಣನ ಕನಸಿನ ದಿನಗಳು

ರಂಗಣ್ಣನು ಉಪಾಧ್ಯಾಯರ ಸಂಘಗಳ ಸಭೆಗಳನ್ನು ಗ್ರಾಮಾಂತರಗಳಲ್ಲಿ ನಡೆಸುತ್ತ ಒಂದು ಕಡೆ ಉಪಾಧ್ಯಾಯರಿಗೆ ಬೋಧನಕ್ರಮ ಮತ್ತು ಸಂವಿಧಾನಗಳಲ್ಲಿ ತಿಳಿವಳಿಕೆಯನ್ನು ಕೊಡುತ್ತಲೂ, ಮತ್ತೊಂದು ಕಡೆಗ್ರಾಮಸ್ಥರಿಗೆ ಇಲಾಖೆಯ ನಿಯಮಗಳನ್ನು ಮತ್ತು ಅವುಗಳ ಉದ್ದೇಶಗಳನ್ನು ತಿಳಿಸುತ್ತಲೂ ಬರುತ್ತಿದ್ದನು. ಜೊತೆಗೆ ಗ್ರಾಮಸ್ಥರಿಗೆ ಉಪಯುಕ್ತವಾದ ನವೀನ ವ್ಯವಸಾಯ ಕ್ರಮ, ಗ್ರಾಮಸ್ಥರ ಆರ್ಥಿಕಾಭಿವೃದ್ಧಿಗೆ ಸಲಹೆಗಳು ನಮ್ಮ ಸಾಹಿತ್ಯ, ನಾಡಿನ ಗತವೈಭವ, ರಾಮಾಯಣ ಮಹಾಭಾರತಗಳಲ್ಲಿರುವ ಕಥೆಗಳು - ಇವುಗಳನ್ನು ತಿಳಿಸುತ್ತಲೂ ಬಂದನು. ಇವುಗಳ ಪರಿಣಾಮವಾಗಿ ಪಾಠ ಶಾಲೆಗಳಲ್ಲಿ ಹೆಚ್ಚು ಶಿಸ್ತು, ಗ್ರಾಮಸ್ಥರ ಸಹಕಾರ ಮತ್ತು ಸಹಾಯ, ಉಪಾಧ್ಯಾಯರಲ್ಲಿ ಹೆಚ್ಚು ಚಟುವಟಿಕೆ, ನಿಯಮಗಳ ಪ್ರಕಾರ ನಡೆಯುವುದು, ಪ್ರಾಮಾಣಿಕತೆಯಿಂದ ಕೆಲಸ ಮಾಡುವುದು ಇವೆಲ್ಲ ಹೆಚ್ಚುತ್ತ ಬಂದುವು. ಒಟ್ಟಿನಲ್ಲಿ ಕೆಲಸ ಚೆನ್ನಾಗಿ ನಡೆಯುತ್ತಿತ್ತು. ಇನ್ಸ್ಪೆಕ್ಟ ರವರು ಶಾಲೆಗೆ ಬಂದು ತಮ್ಮ ಕೆಲಸವನ್ನು ನೋಡಲಿ, ತಮ್ಮ ಶಾಲೆಗೆ ಬಂದು ನೋಡಲಿ ಎಂಬ ಸ್ಪರ್ಧೆ ಬೆಳೆಯಿತು. ಅಲ್ಲಲ್ಲಿ ಉಪಾಧ್ಯಾಯರ ಸಭೆಗಳು ನಡೆದಾಗ ಅವರು ಸಿದ್ಧಗೊಳಿಸಿದ್ದ ಉಪಕರಣಗಳು, ಟಿಪ್ಪಣಿಗಳು, ಕೈಗೆಲಸದ ಮಾದರಿಗಳು- ಇವುಗಳ ಸಣ್ಣದೊಂದು ಪ್ರದರ್ಶನವನ್ನು ರಂಗಣ್ಣನು ಏರ್ಪಾಟು ಮಾಡುತ್ತಿದ್ದನು. ಹೀಗೆ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಕೂಡಿದ ಒಂದು ದೊಡ್ಡ ಸಂಸಾರದಂತೆ ರೇಂಜು ನಡೆದು ಕೊಂಡು ಹೋಗುತ್ತಿತ್ತು. ದಂಡನೆ ಮಾಡಬೇಕಾದ ಸಂದರ್ಭಗಳು ಬಹಳ ಕಡಮೆಯಾದುವು. ಇನ್ ಸ್ಪೆಕ್ಟರವರ ವಿಶ್ವಾಸವನ್ನು ಕಳೆದುಕೊಳ್ಳುವುದೇ ಒಂದು ದಂಡನೆಯೆಂದು ಉಪಾಧ್ಯಾಯರು ಭಾವಿಸುತ್ತ ಬಂದರು.

ಹೀಗೆ ಎಲ್ಲವೂ ಸುಮುಖವಾಗಿ ವ್ಯವಸ್ಥೆಗೆ ಬಂತು. ರಂಗಣ್ಣನಿಗೂ ಮನಸ್ಸಿನಲ್ಲಿ ಸಂತೋಷ ಬೆಳೆಯುತ್ತ ಬಂತು. ಒಂದು ದಿನ ಬೈಸ್ಕಲ್ ಮೇಲೆ ಸುಮಾರು ಒಂಬತ್ತು ಮೈಲಿ ದೂರದ ಬೊಮ್ಮನಹಳ್ಳಿಗೆ ತನಿಖೆ ಬಗ್ಗೆ ಹೊರಟನು. ಪಾಠಶಾಲೆಯ ಕಟ್ಟಡದ ಹತ್ತಿರ ಇಳಿದಾಗ ಬೆಳಗ್ಗೆ ಏಳು ಗಂಟೆ ಇಪ್ಪತ್ತು ನಿಮಿಷಗಳಾಗಿದ್ದುವು. ಬಾಗಿಲು ತೆರೆದಿತ್ತು ;