ಪುಟ:ರಂಗಣ್ಣನ ಕನಸಿನ ದಿನಗಳು.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೬

ರಂಗಣ್ಣನ ಕನಸಿನ ದಿನಗಳು

ಕೊಟ್ಟು ಫಸ್ಟ್ ಕ್ಲಾಸಿನಲ್ಲಿ ತೇರ್ಗಡೆಯಾಗುವಂತೆ ಮಾಡಿದ್ದೇನೆ. ಟ್ರೈನಿಂಗ್ ಸಹಾ ಆಗಿದೆ ' ಎಂದು ಶಿಫಾರಸು ಮಾಡಿದನು. ಇನ್ನು ಕೆಲವು ಪಠ್ಯ ವಿಷಯಗಳಲ್ಲಿ ತನಿಖೆಮಾಡಿದನಂತರ ಹೆಡ್ ಮಾಸ್ಟರು ಖುದ್ದು ಪಾಠ ಹೇಳುತ್ತಿದ್ದ ಮೂರು ಮತ್ತು ನಾಲ್ಕನೆಯ ತರಗತಿಗಳ ತನಿಖೆಗೆ ಪ್ರಾರಂಭವಾಯಿತು.

“ಸ್ವಾಮಿ ! ಮೂರನೆಯ ತರಗತಿಯಲ್ಲಿ ಇಪ್ಪತ್ತೈದು, ನಾಲ್ಕನೆಯ ತರಗತಿಯಲ್ಲಿ ಹದಿನೈದು ಮಕ್ಕಳಿದ್ದಾರೆ. ಹೆಚ್ಚಿಗೆ ಒಬ್ಬರು ಮೇಷ್ಟರನ್ನು ಕೊಡಬೇಕೆಂದು ತಮಗೆ ಹಿಂದೆಯೇ ಅರಿಕೆ ಮಾಡಿಕೊಂಡಿದ್ದೆ. ಸ್ವಾಮಿಯವರ ಮನಸ್ಸಿಗೆ ಬರಲಿಲ್ಲ. ಇಲ್ಲೇ ಅರ್ಧ ಮೈಲಿ ದೂರದಲ್ಲಿ ಸರಕಾರಿ ಸ್ಕೂಲಿದೆ. ಏಳೆಂಟು ಹುಡುಗರು ಸಹ ಅಲ್ಲಿ ಓದುತ್ತಾ ಇಲ್ಲ. ಎಲ್ಲರೂ ಈ ಪಾಠಶಾಲೆಗೆ ಬರುತ್ತಾರೆ. ಆ ಪಾಠ ಶಾಲೆಯನ್ನು ರದ್ದು ಮಾಡಿ ಆ ಮೇಷ್ಟ ರನ್ನು ಇಲ್ಲಿಗೆ ಕಳಿಸಿಕೊಟ್ಟರೆ ಸಾಕು, ಈಗ ಆ ಮೇಷ್ಟರಿಗೆ ದಂಡದ ಸಂಬಳ- ಪುಕಸಟ್ಟೆ ಹದಿನೈದು ರೂಪಾಯಿ ಕೊಡುತ್ತಾ ಇದ್ದೀರಿ. ಅದೇಕೆ ಸ್ವಾಮಿ ಮೇಷ್ಟರಿಗೆ ದಂಡದ ಸಂಬಳ ಕೊಡಬೇಕು ?' ಎಂದು ಹೆಡ್ ಮಾಸ್ಟರ್ ಹೇಳಿದನು.

'ಆಗಲಿ ವೆಂಕಟಸುಬ್ಬಯ್ಯ, ದಾಖಲೆಗಳನ್ನು ನೋಡಿ ಇತ್ಯರ್ಥ ಮಾಡುತ್ತೇನೆ.'

ಇನ್ ಸ್ಪೆಕ್ಟರ್ ಸಾಹೇಬರು ಮಕ್ಕಳನ್ನು ಪರೀಕ್ಷಿಸಿದರು. ಅವರು ಬಹಳ ಚೆನ್ನಾಗಿ ಉತ್ತರಗಳನ್ನು ಹೇಳಿದರು. ಉಕ್ತಲೇಖನದಲ್ಲಿ ಅನೇಕರು ತಪ್ಪುಗಳಿಲ್ಲದೆ ಬರೆದರು ; ಅಕ್ಷರಗಳು ದುಂಡಾಗಿ ಚೆನ್ನಾಗಿ ದ್ದುವು. ರೇ೦ಜಿನಲ್ಲೆಲ್ಲ ಶಿಸ್ತಿನಲ್ಲಿ ಬೋಧನಕ್ರಮಗಳ ಅನುಸರಣೆಯಲ್ಲಿ, ವಿದ್ಯಾಭಿವೃದ್ಧಿಯಲ್ಲಿಯೂ ಆ ಪಾಠಶಾಲೆ ಮೊದಲನೆಯದಾಗಿ ಕಂಡುಬಂತು. ಗೋಡೆಯಮೇಲೆ ನೇತುಹಾಕಿದ್ದ ಪಟ್ಟಿಗಳಲ್ಲಿ ಒಂದರ ಕಡೆಗೆ ರಂಗಣ್ಣನ ದೃಷ್ಟಿ ಹೋಯಿತು. ಅದನ್ನು ನೋಡಿದಾಗ ವಾಠಶಾಲೆಯ ನೈರ್ಮಲ್ಯ ಪಾಲನೆಯ ವಿಚಾರದಲ್ಲಿ ಹೆಡ್ ಮಾಸ್ಟರು ಏರ್ಪಡಿಸಿದ್ದ ಒಂದು ನಿಬಂಧನೆಯು ಕಂಡುಬಂತು. ಮೂರನೆಯ ಮತ್ತು ನಾಲ್ಕನೆಯ ತರಗತಿಗಳ ಒಟ್ಟು ಮಕ್ಕಳಲ್ಲಿ ಹತ್ತು ಮಂದಿ ಹುಡುಗಿಯರಿದ್ಧ ರು. ಉಳಿದ