ಪುಟ:ರಂಗಣ್ಣನ ಕನಸಿನ ದಿನಗಳು.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೦

ರಂಗಣ್ಣನ ಕನಸಿನ ದಿನಗಳು

ರಂಗಣ್ಣ ಬೋಂಡವನ್ನು ರುಚಿ ನೋಡಿದರೆ ಬಹಳ ಸೊಗಸಾಗಿತ್ತು; ತುಪ್ಪದಲ್ಲಿ ಕರದದ್ದು ; ಉಪ್ಪಿಟ್ಟು ಬಹಳ ರುಚಿಯಾಗಿತ್ತು ; ಕಾಫಿ ತರತೀಪಾಗಿತ್ತು. ಹಿಂದೆ ಎಲ್ಲಿಯೂ ಇಂಥ ರುಚಿಕರವಾದ ಉಪ್ಪಿಟ್ಟು ಬೋ೦ಡಗಳು ಅವನಿಗೆ ದೊರೆತಿರಲಿಲ್ಲ. ಉಪಾಹಾರವೆಲ್ಲ ಮುಗಿದಮೇಲೆ ಎಳನೀರುಗಳೆರಡು ಬಂದುವು. ಅವುಗಳಲ್ಲಿ ಒಂದನ್ನು ರಂಗಣ್ಣ ತೆಗೆದುಕೊಂಡು, 'ಹೆಡ್‌ಮೇಷ್ಟರೇ , ನೋಡಿ ! ನಮ್ಮ ರೇಂಜಿನಲ್ಲಿ ಕೆಲವರು ಉಪಾಧ್ಯಾಯರು ನನ್ನ ಅಪ್ಪಣೆಯಂತೆ ನಡೆಯುವುದಿಲ್ಲ. ಸಂಸಾರದಲ್ಲಿ ಒ೦ದೊ ಗಂಡನ ಮಾತಿನಂತೆ ಹೆಂಡತಿ ನಡೆಯಬೇಕು ; ಇಲ್ಲ ಹೆಂಡತಿಯ ಮಾತಿನಂತೆ ಗಂಡ ನಡೆಯಬೇಕು. ಆಗ ಸಂಸಾರದಲ್ಲಿ ವಿರಸ ಕಾಣುವುದಿಲ್ಲ. ಮೇಷ್ಟರ ಮಾತಿನಂತೆಯೇ ನಾನು ನಡೆದರೆ ವಿರಸ ತಪ್ಪುತ್ತದೆ. ಇಲ್ಲವೇ ? ನೀವು ಹೇಳಿದ ಹಾಗೆ ನಾನು ನಡೆದುಕೊಂಡಿದ್ದೇನೆ; ಉಪಾಹಾರವನ್ನೆಲ್ಲ ಮುಗಿಸಿದ್ದೇನೆ. ಇನ್ನು ನಾನು ಹೊರಡುತ್ತೇನೆ, ಎಂದು ಹೇಳಿ ಎದ್ದನು.

'ಖಂಡಿತ ತಾವು ಹೋಗ ಕೂಡದು ಸ್ವಾಮಿ! ಒಳ್ಳೆಯ ಮಧ್ಯಾಹ್ನದ ಹೊತ್ತು ! ಬೈಸ್ಕಲ್ ತುಳಿದು ಕೊಂಡು ಹತ್ತು ಮೈಲಿ ಹಿಂದಿರುಗುವುದೆಂದರೇನು ! ಖ೦ಡಿತ ಕೂಡದು. ನಾನು ಬ್ರಾಹ್ಮಣ, ಮಧ್ಯಾಹ್ನದ ಹೊತ್ತು ಅಭ್ಯಾಗತರಾಗಿ ಬಂದ ದೊಡ್ಡ ಮನುಷ್ಯರನ್ನು ಹಾಗೆಯೆ ಕಳುಹಿಸುವುದುಂಟೆ ?'

'ಹಾಗೆಲ್ಲ ನಾನು ಮೇಷ್ಟರ ಮನೆಯಲ್ಲಿ ಊಟ ಮಾಡುವುದಿಲ್ಲ.'

'ಅದೇಕೆ ಸ್ವಾಮಿ ? ತಮ್ಮ ಇನ್ ಸ್ಪೆಕ್ಟರ್ ಕೆಲಸ ಆಗಿಹೋಯ್ತು, ನನ್ನ ಮೇಷ್ಟರ ಕೆಲಸ ಪೂರೈಸಿಹೋಯಿತು. ಇನ್ನೆಂಥ ಮೇಷ್ಟ್ರು ನಾನು! ಇನ್ನೆಂಥ ಇನ್ ಸ್ಪೆಕ್ಟರ್‌ ನೀವು. ವರದಿ ಆಯಿತು, ಪೆಟ್ಟಿಗೆಯಲ್ಲಿ ಸೇರಿಹೋಯಿತು. ಅದಕ್ಕೋಸ್ಕರವೇ ಸ್ವಾಮಿ ! ನಾನು ಖಂಡಿತವಾಗಿ ಆಡಿಬಿಟ್ಟೆ, ತಮ್ಮ ಇನ್ಸ್ಪೆಕ್ಟರ್ ಗಿರಿಯೆಲ್ಲ ಮುಗಿದು ಹೋಗಲಿ ; ಬರಿಯ ಮನುಷ್ಯರಾಗಿ ಮಾತ್ರ ಉಳಿಯಲಿ ಎಂದು ಆಡಿಬಿಟ್ಟೆ. ಈಗ ನನಗೂ ತಮಗೂ ಇರುವ ಸಂಬಂಧ ಮನುಷ್ಯ ಮನುಷ್ಯರ ಸಂಬಂಧ ! ಊಟದ ಹೊತ್ತು, ತಾವು ಬಿಸಿಲಿನಲ್ಲಿ ಹೋಗಕೂಡದು.'