ಪುಟ:ರಂಗಣ್ಣನ ಕನಸಿನ ದಿನಗಳು.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರು ವೆಂಕಟಸುಬ್ಬಯ್ಯ

೧೨೩

ಎಂದು ರಂಗಣ್ಣ ಪೇಚಾಡಿಹೋದನು. 'ಸ್ವಾಮಿ ! ಆ ಕಬ್ಬಿಣದ ಪೆಟ್ಟಿಗೆಯ ವಿಚಾರವನ್ನು ಏನೆಂದು ಹೇಳಲಿ! ಹೊಟ್ಟೆಯುರಿಯುತ್ತದೆ ! ಹೆತ್ತ ಹೊಟ್ಟೆ ಕೆಟ್ಟದ್ದು ಸ್ವಾಮಿ ! ಹೆಣ್ಣು ಮಕ್ಕಳನ್ನು ಹೆರಬಾರದು ! ಹೆರಬಾರದು !'- ಎಂದು ವೆಂಕಟಸುಬ್ಬಯ್ಯ ಹೇಳಿ ಕಣ್ಣೀರು ಮಿಡಿಯುತ್ತ, " ಅಮ್ಮ, ತಾಯಿ ! ಇನ್ ಸ್ಪೆಕ್ಟರ್ ರವರು ಬಂದಿದ್ದಾರೆ. ಬಂದು ನಮಸ್ಕಾರ ಮಾಡಮ್ಮ! ಅವರ ಆಶೀರ್ವಾದದ ಫಲದಿಂದ ಏನಾದರೂ ಒಳ್ಳೆಯದಾಗಲಿ' ಎಂದು ಮಗಳನ್ನು ಕರೆದನು.

ರಂಗಣ್ಣನ ಉತ್ಸಾಹವೆಲ್ಲ ಇಳಿದುಹೋಯಿತು. ' ಈ ಮನುಷ್ಯ ಸುಖವಾಗಿ ಮತ್ತು ಸಂತೋಷವಾಗಿ ಇದ್ದಾನೆ ಎಂದು ನಾನು ಅಂದು ಕೊಂಡಿದ್ದೇ ಪಾಪವಾಯಿತಲ್ಲ ! ಇ೦ಥ ಖಂಡಿತವಾದಿ, ಒರಟು ಮನುಷ್ಯ, ಒಂದೇ ನಿಮಿಷದಲ್ಲಿ ಬಸಿರ ಬೇಗೆಗೆ ಸಿಕ್ಕಿ ಬೆಣ್ಣೆಯಂತೆ ಕರಗಿ ಕಣ್ಣೀರು ಮಿಡಿಯುತ್ತಿದ್ದಾನೆ! ಇದೇನು ಶೋಕದ ವಿಚಿತ್ರ ! ' ಎಂದು ಹೇಳಿಕೊಳ್ಳುತ್ತಿದ್ದ ಹಾಗೆ ಸುಮಾರು ಇಪ್ಪತ್ತು ವರ್ಷ ವಯಸ್ಸಿನ ಯುವತಿ ಬಹಳ ಸಂಕೋಚದಿಂದ ಬಂದು ರಂಗಣ್ಣನಿಗೆ ನಮಸ್ಕಾರ ಮಾಡಿದಳು. ಹಣೆಯಲ್ಲಿ ಕುಂಕುಮವಿತ್ತು. ಕೊರಳಲ್ಲಿ ತಾಳಿಯಿತ್ತು. ದೇವರು ಒಳ್ಳೆಯದನ್ನು ಮಾಡಲಮ್ಮ! ಇನ್ನು ಒಳಕ್ಕೆ ಹೋಗು ತಾಯಿ -ಎಂದು ರಂಗಣ್ಣನು ಹೇಳಿದನು. ಆಕೆ ಹೊರಟು ಹೋದಳು, ನೋಡಿದಿರಾ ಸ್ವಾಮಿ ! ಆ ಹುಡುಗಿ ನನ್ನ ಹಿರಿಯ ಮಗಳು. ಈ ಪಾಪಿಷ್ಟನ ಹೊಟ್ಟೆಯಲ್ಲಿ ಏಕೆ ಹುಟ್ಟಿ ದಳೊ ಕಾಣೆ ! ಆ ಹುಡುಗಿಯನ್ನು ನನ್ನ ಅಳಿಯ ಬಿಟ್ಟು ಬಿಟ್ಟು ನಾಲ್ಕು ವರ್ಷಗಳಾದುವು ! ಹೆತ್ತವರ ಸಂಕಟ ನೋಡಿ ಸ್ವಾಮಿ ! ನಾವು ತಿನ್ನೊ ಅನ್ನವೆಲ್ಲ ಆ ಹುಡುಗಿಯನ್ನ ನೋಡಿದರೆ ಭಸ್ಮವಾಗಿ ಹೋಗುತ್ತೆ ! '

'ಏಕೆ ಬಿಟ್ಟು ಹೋದ ? ಅಳಿಯನ ತಕರಾರೇನು ? '

'ಆಳಿಯ ನನ್ನ ಸಮೀಪ ಬಂಧು. ಹುಡುಗ ಯೋಗ್ಯನಾಗಿದ್ದ ; ಜಮೀನು ಸ್ವಲ್ಪ ಇದೆ, ಎಸ್.ಎಸ್.ಎಲ್.ಸಿ. ಪಾಸ್ ಮಾಡಿದ್ದಾನೆ. ಯಾರೊ ದುರ್ಬೋಧನೆ ಮಾಡಿದರು ಅಂತ ಕಾಣುತ್ತೆ. ಎರಡು ಎಕರೆ ಗದ್ದೆ, ಎರಡು ಸಾವಿರ ರೂಪಾಯಿ ನಗದು ಕೊಟ್ಟರೆ ನಿನ್ನ ಮಗಳೊಡನೆ