ಪುಟ:ರಂಗಣ್ಣನ ಕನಸಿನ ದಿನಗಳು.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೪

ರಂಗಣ್ಣನ ಕನಸಿನ ದಿನಗಳು

ಸಂಸಾರ ನಡೆಸುತ್ತೇನೆ ; ಇಲ್ಲವಾದರೆ ನಿನ್ನ ಮನೆಯಲ್ಲಿ ತಂದು ಬಿಡುತ್ತೇನೆ ಎಂದು ನನಗೆ ಕಾಗದ ಬರೆದ. ನಾನೇನು ಮಾಡಲಿ ? ನನಗೆ ಒಟ್ಟು ಮೂರು ಹೆಣ್ಣು ಮಕ್ಕಳು, ಮೂರು ಗಂಡು ಮಕ್ಕಳು, ಎರಡನೆಯ ಹುಡುಗಿ ಏನೊಂದೂ ಗಲಭೆಯಿಲ್ಲದೆ ಗಂಡನೊಡನೆ ಸಂಸಾರ ಮಾಡಿಕೊಂಡಿದ್ದಾಳೆ. ಮೂರನೆಯ ಹುಡುಗಿ ಲಂಗ ಕಟ್ಟಿ ಕೊಂಡು ಓಡಾಡುತ್ತಿದಾಳೆ ; ಇನ್ನೂ ಅವಳಿಗೆ ಮದುವೆಯಿಲ್ಲ. ಹಿರಿಯ ಅಳಿಯನಿಗೆ ಅವನು ಕೇಳಿದ್ದನ್ನು ಕೊಟ್ಟರೆ, ಉಳಿದ ಅಳಿಯಂದರಿಗೂ ಹಾಗೆಯೇ ಕೊಡಬೇಕು. ಅರ್ಧ ಗದ್ದೆ ಯೆಲ್ಲ ಅವರಿಗೆ ಹೋದರೆ ನನ್ನ ಗಂಡು ಮಕ್ಕಳ ಗತಿ ? ನಾನೂ ಬಹಳ ಆಲೋಚನೆ ಮಾಡುತ್ತಿದ್ದೆ ಸ್ವಾಮಿ ! ಅವನಿಗೆ ಉತ್ತರ ಬರೆಯುವುದು ತಡವಾಯಿತು. ಹುಡುಗಿಯನ್ನು ಬಸ್ಸಿನಲ್ಲಿ ಕರೆದುಕೊಂಡು ಬಂದು ದೊಡ್ಡ ರಸ್ತೆಯಲ್ಲಿ ಬಿಟ್ಟು ಬಿಟ್ಟು, ಹೋಗು ನಿಮ್ಮಮ್ಮನ ಮನೆಗೆ !' ಎಂದು ಹೇಳಿ ಬಸ್ಸಿಳಿಯದೆ ಹಾಗೆಯೇ ಹೊರಟು ಹೋದ. ಈ ನನ್ನ ಮಗಳು ಅಳುತ್ತಾ ಸಾಯಂಕಾಲ ಮನೆಗೆ ಬಂದು ಸೇರಿದಳು !'

'ನನ್ನ ಹೆಂಡತಿ ಕೊರಗಿ ಕೊರಗಿ, ಜಮೀನು ಹೋದರೆ ಹೋಗಲಿ ; ಗಂಡುಮಕ್ಕಳಾದರೇನು, ಹೆಣ್ಣು ಮಕ್ಕಳಾದರೇನು; ಎಲ್ಲರೂ ಹೊಟ್ಟೆಯಲ್ಲಿ ಹುಟ್ಟಿದವರೇ! ಎಲ್ಲರಿಗೂ ನಾನು ಬೇನೆ ಪಡಲಿಲ್ಲವೇ ? ಕೊಟ್ಟು ಬಿಡೋಣ- ಎಂದು ಹೇಳಿದಳು. ನಾನೂ ಅದೇ ನಿರ್ಧಾರಕ್ಕೆ ಬಂದೆ. ಆದರೆ ಆ ಹುಡುಗನ ನಡತೆ ಚೆನ್ನಾಗಿಲ್ಲ ಸ್ವಾಮಿ ! ನಾಟಕದ ಕಂಪೆನಿಯಲ್ಲಿ ಸೇರಿಕೊಂಡಿದ್ದಾನೆ ಸರಿಯಾದ ಸಹವಾಸ ಗಂಟು ಬಿದ್ದಿಲ್ಲ. ಅಲ್ಲಿಯ ನಟಿಯರಲ್ಲಿ ಲೋಲನಾಗಿದ್ದಾನೆ. ಈ ದಿನ ಗದ್ದೆ ಮತ್ತು ರೂಪಾಯಿಗಳನ್ನು ಕೊಟ್ಟೆನೋ, ನಾಳೆಯೇ ಪರಭಾರೆ ಮಾಡಿ ಬಿಡುತ್ತಾನೆ. ಆಮೇಲೆ ನನ್ನ ಮಗಳನ್ನು ತಂದು ಇಟ್ಟುಕೋ ನಿನ್ನ ಮಗಳನ್ನ ನಿನ್ನ ಮನೆಯಲ್ಲಿ ಎಂದು ಬಿಟ್ಟು ಹೋಗುತ್ತಾನೆ. ಏನು ಮಾಡುವುದಕ್ಕೂ ತೋಚುವುದಿಲ್ಲ. -

'ದೇವರು ಅವನಿಗೆ ಒಳ್ಳೆಯ ಬುದ್ದಿ ಕೊಡಲಿ ಎಂದು ನಾನು ಪ್ರಾರ್ಥಿಸುತ್ತೇನೆ' ಎಂದು ರಂಗಣ್ಣ ಹೇಳಿದನು.