ಪುಟ:ರಂಗಣ್ಣನ ಕನಸಿನ ದಿನಗಳು.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರು ವೆಂಕಟಸುಬ್ಬಯ್ಯ

೧೨೫

'ಪೆಟ್ಟಿಗೆ ವಿಚಾರ ಕೇಳಿದಿರಿ. ನೋಡಿ ಸ್ವಾಮಿ! ಯಥಾಶಕ್ತಿ ಆ ಹುಡುಗಿಗೆ ಒಡವೆ ವಸ್ತು ಕೊಟ್ಟಿದ್ದೇನೆ. ಸುಮಾರು ಎರಡು ಸಾವಿರ ರೂಪಾಯಿಗಳ ಬೆಲೆ ಆಗಬಹುದು. ಆ ಅಳಿಯನಿಗೆ ಒಳ್ಳೆಯ ಬುದ್ಧಿ ಹುಟ್ಟಿ, ಏನಾದರೂ ಮನೆಗೆ ಬಂದರೆ ಅವನಿಗೆ ಕೊಡುವುದಕ್ಕೆ ಎರಡು ಸಾವಿರ ರೂಪಾಯಿಗಳನ್ನು ನಗದು ಇಟ್ಟಿದ್ದೇನೆ. ಆ ಅಳಿಯನಿಗೆ ಕೊಡುತ್ತಲೂ ಎರಡನೆಯವನು ತಕರಾರು ಎಬ್ಬಿಸಬಹುದೆಂದು ಹೆದರಿ ಅವನ ನಾಲಿನದು ಎರಡು ಸಾವಿರ ರೂಪಾಯಿಗಳನ್ನು ಇಟ್ಟಿದ್ದೇನೆ. ಈ ಹಾಳು ಕೊಂಪೆಯಲ್ಲಿ ಆ ಹಣ, ಆ ಒಡವೆ ವಸ್ತುಗಳನ್ನು ಜೋಪಾನವಾಗಿಡಬೇಕಲ್ಲ ಎಂದು ಎರಡು ವರ್ಷಗಳ ಹಿಂದೆ ಕಬ್ಬಿಣದ ಪೆಟ್ಟಿಗೆಯನ್ನು ಕೊಂಡುಕೊಂಡು ಬಂದೆ. ಪೆಟ್ಟಿಗೆಯಲ್ಲಿ ಅವುಗಳನ್ನಿಟ್ಟಿದ್ದರೂ ಸಹ ರಾತ್ರಿ ಸರಿಯಾಗಿ ನಿದ್ರೆ ಹತ್ತು ವುದಿಲ್ಲ. ಆ ಹುಡುಗಿ ತನ್ನ ಗಂಡನ ಮನೆ ಸೇರಿ, ಅವನೂ ಒಂದು ಕಡೆ ನೆಲೆಯಾಗಿ ನಿಂತು, ನನ್ನ ಮೇಲಿನ ಭಾರ ಯಾವಾಗ ಇಳಿದೀತೋ ಭಗವಂತ- ಎ೦ದು ದಿನವೂ ಪ್ರಾರ್ಥಿಸುತ್ತಾ ಇದ್ದೇನೆ

'ವೆಂಕಟಸುಬ್ಬಯ್ಯ ! ನಿಮ್ಮ ಅಳಿಯನೇನೋ ಕೆಟ್ಟ ವನು. ಅವನಿಗೆ ಯಾರಾದರೂ ಬುದ್ದಿ ಹೇಳ ಬೇಕು.'

'ಈಗ ನನ್ನ ಎರಡನೆಯ ಮಗಳು ತನ್ನ ಪಾಡಿಗೆ ತಾನು ಸಂಸಾರ ನಡೆಸುತ್ತಿದ್ದಾಳೆ. ನನಗೆ ಎಷ್ಟೋ ಸಂತೋಷ. ಹಾಗೆಯೇ ನನ್ನ ಹಿರಿಯ ಮಗಳೂ ಸಂಸಾರ ನಡೆಸಿಕೊಂಡಿದ್ದಿದ್ದರೆ ಸಂತೋಷ ಇಮ್ಮಡಿಯಾಗುತ್ತಿತ್ತು. ಈಗಲೂ ನನಗೆ ಹಿರಿಯ ಅಳಿಯನ ವಿಚಾರದಲ್ಲಿ ಪ್ರೀತಿ. ಅವನು ನಾಳೆ ನಾಟಕದ ಕಂಪೆನಿ ಬಿಟ್ಟು ಇಲ್ಲಿ ಬಂದು ನೆಲಸಲಿ, ಬಾಚಿ ತಬ್ಬಿ ಕೊಳ್ಳುತ್ತೇನೆ ಬೇಕಾದ ಅನುಕೂಲ ಮಾಡಿ ಕೊಡುತ್ತೇನೆ.'

'ಒಳ್ಳೆಯದು ವೆಂಕಟಸುಬ್ಬಯ್ಯ ! ಆ ಕಾಲವೂ ಬರುತ್ತದೆ. ಅಲ್ಲಿಯವರೆಗೂ ನಿಮ್ಮ ಕಷ್ಟ ದುಃಖ ಸೈರಿಸಿ ಕೊಳ್ಳಬೇಕು ; ಹುಡುಗಿಯ ಮನಸ್ಸು ನೋಯದಂತೆ ನೋಡಿಕೊಳ್ಳಬೇಕು; ಆಕೆಯನ್ನು ಏನೂ ಆಡದೆ ಆದರಿಸಬೇಕು.'