ಪುಟ:ರಂಗಣ್ಣನ ಕನಸಿನ ದಿನಗಳು.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ಲೇಗು ಮಾರಿಯ ಹೊಡೆತ

೧೩೧

'ಊರಿನವರು ಎಂದರೆ ಯಾರು ಸಾರ್ ? ನಾನು ವೈಸ್ ಪ್ರೆಸಿಡೆಂಟ್ ! ನಾನು ಹೇಳುತ್ತೇನೆ : ನನ್ನ ಆಕ್ಷೇಪಣೆಯಿಲ್ಲ. ನಮ್ಮ ಊರಿನ ಕೌನ್ಸಿಲ್ಲಿನ ಆಕ್ಷೇಪಣೆ ಇಲ್ಲದಂತೆ ನಾನು ನೋಡಿಕೊಳ್ಳಬಲ್ಲೆ. ದಾರಿಯಲ್ಲಿ ಹೋಗುವವರ ಆಕ್ಷೇಪಣೆ ಕಟ್ಟಿ ಕೊಂಡು ನಿಮಗೇನು ?)

'ಕಲ್ಲೇಗೌಡರ ಆಕ್ಷೇಪಣೆ ಬರುವುದಿಲ್ಲವೋ ?”

'ತಮ್ಮ ಕಟ್ಟಡವನ್ನು ರಿಪೇರಿ ಮಾಡಿಸಿ ಕೊಡಲಿ ! ಅವರಿಗೇನು ಹಣವಿಲ್ಲವೇ ? ಕೈ ಕೆಳಗೆ ಆಳುಗಳಿಲ್ಲವೇ ? ಮನಸ್ಸು ಮಾಡಿದರೆ ಹದಿನೈದು ದಿನಗಳಲ್ಲಿ ಸೊಗಸಾಗಿ ರಿಪೇರಿ ಮಾಡಿ ಕೊಡಬಲ್ಲರು. ಸುಮ್ಮಸುಮ್ಮನೆ ಆಕ್ಷೇಪಣೆ ಮಾಡಿದರೆ ನಾವು ಕೇಳಬೇಕಲ್ಲ !?

ರಂಗಣ್ಣನಿಗೆ ಆ ಕಟ್ಟಡದ ವಿಚಾರದಲ್ಲಿ ಒಂದು ದಾರಿ ಕಂಡಹಾಗಾಯಿತು. “ಒಳ್ಳೆಯದು. ಆಲೋಚನೆ ಮಾಡುತ್ತೇನೆ' ಎಂದು ಉತ್ತರ ಕೊಟ್ಟು ಹಳ್ಳಿಯ ಕಡೆ ಹೊರಟನು. ಮೂರು ಮೈಲಿಗಳ ದೂರ ಹೋದನಂತರ ಒಂದು ಹಳ್ಳಿ ಸಿಕ್ಕಿತು. ಜನವೇ ಇರಲಿಲ್ಲ; ಪಾಠಶಾಲೆಯ ಬಾಗಿಲು ಮುಚ್ಚಿತ್ತು. ಎಲ್ಲಿ ಹುಡುಗರ ಕಲಕಲಧ್ವನಿಯೂ ಆಟ ಪಾಟಗಳೂ ಇರುತ್ತಿದ್ದುವೋ ಅಲ್ಲಿ ನೀರವ ! ಮೂದೇವಿ ಬಡಿಯುತ್ತಿತ್ತು ! ಪಾಠಶಾಲೆಯ ಕೈತೋಟ ನೀರಿಲ್ಲದೆ ಒಣಗುತ್ತಿತ್ತು. ಪ್ರಾಣಿಗಳು ಕೂಡ ಕಣ್ಣಿಗೆ ಬೀಳಲಿಲ್ಲ. ರಂಗಣ್ಣ ನಿಟ್ಟು ಸಿರು ಬಿಡುತ್ತ ಮುಂದೆ ಅರ್ಧ ಮೈಲಿ ಹೋದಮೇಲೆ ಗುಡಿಸಿಲುಗಳು ಕಂಡವು. ಅಲ್ಲಿ ಪ್ರಾಣಿಗಳ ಸಂಚಾರ, ಜನ ಸಂಚಾರ ಇತ್ತು, ಹತ್ತಿರದ ಒಂದು ಆಲದ ಮರದ ಕೆಳಗೆ ಹೋಗಿ ನಿಂತನು. ಐದು ನಿಮಿಷಗಳಲ್ಲಿ ನಾಲ್ಕಾರು ಹುಡುಗರು ಬಂದು ಸೇರಿದರು. ಇಬ್ಬರು ಓಡಿ ಹೋಗಿ ಹಿರಿಯರಿಗೆ ವರ್ತಮಾನ ಕೊಟ್ಟರು. ನಾಲ್ಕು ಜನ ಗೌಡಗಳು ಬಂದು ಕೈ ಮುಗಿದು, ' ಅಯ್ಯೋ ಸೋಮಿ ! ಯಾಕಾನ ಈ ಅಳ್ಳಿಗೆ ಬಂದ್ರೋ ! ಊರಾಗೇ ಹಾದು ಬಂದ್ರಾ ?' ಎಂದು ಕೇಳಿದರು.

“ಹೌದಪ್ಪ, ಹಳ್ಳಿಯನ್ನು ಹೊಕ್ಕೇ ಬಂದೆ, ಜನ ಯಾರೂ ಇರಲಿಲ್ಲ.'

'ಮಾರಿಗುಡಿ ಪಕ್ಕ ದಾಗೇ ಹಾದು ಬಂದ್ರಾ ಸೋಮಿ ?'

'ಹೌದಪ್ಪ !'