ಪುಟ:ರಂಗಣ್ಣನ ಕನಸಿನ ದಿನಗಳು.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೬

ರಂಗಣ್ಣನ ಕನಸಿನ ದಿನಗಳು

ಎಂದು ಇನ್ನೊಬ್ಬ ಹೇಳಿದ್ದೂ ಕೇಳಿಸಿತು. ರಂಗಣ್ಣ ಕಷ್ಟ ಪಟ್ಟು ಕೊಂಡು ಎದ್ದನು. ರುಮಾಲು ಎಲ್ಲೋ ದೂರದಲ್ಲಿ ಬಿದ್ದಿತ್ತು. ಸುತ್ತಲೂ ಭಯದಿಂದ ನೋಡಿದನು ; ಕಾಲಿಗೇನಾದರೂ ಸುತ್ತಿಕೊಂಡಿದೆಯೇನೋ ಎಂದು ನೋಡಿದನು. ಏನೂ ಕಾಣಲಿಲ್ಲ. ಹತ್ತಿರ ಹುತ್ತವೂ ಕಾಣಲಿಲ್ಲ. ತನ್ನ ಕೈ ಕಾಲು ತರಚಿಹೋಗಿತ್ತು, ಮುಖಕ್ಕೆ ಸಹ ಸ್ವಲ್ಪ ಏಟು ಬಿದ್ದಿತ್ತು. ಸ್ವಲ್ಪ ಸುಧಾರಿಸಿಕೊಂಡು ರುಮಾಲನ್ನು ಕೈಗೆ ತೆಗೆದುಕೊಂಡಾಗ ಗೌಡನೊಬ್ಬನು, ಎಲಾ, ನಮ್ಮಿನ್ಸ್‌ ಪೆಟ್ರು ಕಾಣಾ ! ಅಯ್ಯೋ ದ್ಯಾವ್ರೇ ! ಯಾಕಾನಾ ಬಂದ್ರೋ ' - ಎಂದು ಉದ್ಗಾರ ತೆಗೆದನು. ಮತ್ತೊಬ್ಬನು ಹಾಗೆಯೆ ನೋಡಿ, ' ಏನಾಯ್ತು ಸೋಮಿ ? ಬೈಸ್ಕಲ್ಲಿಂದ ಬಿದ್ರಾ ?” ಎಂದು ಕೇಳಿದನು. ರಂಗಣ್ಣನಿಗೆ ಇನ್ನೂ ಮಾತು ತೊದಲುತ್ತಲೇ ಇತ್ತು, ಕಾಲುಗಳಲ್ಲಿ ನಡುಕವೂ ಇತ್ತು. ಆದರೆ ಆ ನಿರ್ಜನ ಪ್ರದೇಶದಲ್ಲಿ ಆ ಇಬ್ಬರು ಗೌಡರನ್ನು ನೋಡಿ ಸ್ವಲ್ಪ ಧೈರ್ಯ ಬಂತು, ಆಗ ನಡೆದ ವಿಷಯವನ್ನು ತಿಳಿಸಿದನು. ಗೌಡನೊಬ್ಬನು, " ಅದ್ಯಾಕ್ ಸೋಮಿ ಅಂಗ್ ಎದ್ರೋದು? ಅದೇನ್ ಮಾಡ್ತೈತೆ | ನಮ್ಮ ಹೊಲದಾಗೆ ಗದ್ಯಾಗೆ ದಿನಾಲೂ ಓಡಾಡತಾವೆ. ಇಲಿಸಲಿ ಶಿಸ್ಕೊಂಡು ತನ್ ಪಾಡ್ಗೆ ತಾನಿರ್ತೈತೆ, ಅದರ ತಂಟೆಗೆ ನಾವು ಹೋಗದಿದ್ರೆ ಅದೂ ನಮ್ಮ ತಂಟೆಗೆ ಬರಾಕಿಲ್ಲ !' ಎಂದು ಹೇಳಿದನು.

ಎರಡನೆಯವನು, ಒಬ್ಬೊಬ್ಬರೇ ಇಂಗೆಲ್ಲ ಕಾಡದಾರಿಲಿ ಒಡ್ಯಾ ಡಬ್ಯಾಡಿ ಸೋಮಿ ! ಗರಚಾರ ಎಂಗಿರ್ತೈತೋ ಏನೋ ! ಈಗ ನಡೀರಲಾ ಮತ್ತೆ. ನಿಮ್ಮನ್ನ ದೊಡ್ಡರಸ್ತೆ ಸೇರ್ಸಿಬಿಟ್ ಬರ್ತೇವಿ. ಕಾಲಬಂಡಿ ತೆಕ್ಕೊಳ್ರಿ… ಕೈಗೆ ” ಎಂದು ಹೇಳಿದನು.

ರಂಗಣ್ಣ ತನ್ನ ಉಡುಪುಗಳನ್ನು ಕೊಡವಿಕೊಂಡು, ಕೈವಸ್ತ್ರದಿಂದ ಮುಖವನ್ನೂ ಸರಾಯಿ ಮತ್ತು ಅ೦ಗಿಗಳನ್ನೂ ಒರಸಿಕೊಂಡು, ರುಮಾಲನ್ನು ಹಾಕಿಕೊಂಡು, ಬೈಸ್ಕಲ್ಲನ್ನು ತಳ್ಳಿಕೊಂಡು ಹೊರಟನು. ಕೈ ದೊಣ್ಣೆಗಳನ್ನು ಹಿಡಿದಿದ್ದ ಆ ರೈತರು ಮುಂದೆ ನಡೆಯುತ್ತ ಹೊರಟರು. ಪ್ಲೇಗು ಹರಡಿರುವುದು, ಜನ ಅಲ್ಲಲ್ಲಿ ಸಾಯುತ್ತಿರುವುದು, ಇನಾಕ್ಯುಲೇಷನ್ಮಾ ಡಿಸಿಕೊಳ್ಳುವ ವಿಚಾರ - ಇವುಗಳನ್ನೆಲ್ಲ ಮಾತನಾಡುತ್ತ ರಂಗಣ್ಣ