ಪುಟ:ರಂಗಣ್ಣನ ಕನಸಿನ ದಿನಗಳು.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೪

ರಂಗಣ್ಣನ ಕನಸಿನ ದಿನಗಳು

'ಆವರ ಗಲಭೆ ಗಲಭೆಗಳನ್ನೆಲ್ಲ ನಾವು ಸಡ್ಡೆ ಮಾಡುವುದಿಲ್ಲ ! ರೂಲ್ಸು ಪ್ರಕಾರ ನಾವು ನಡೆಸಿಬಿಡುತ್ತೇವೆ !

ಮುಂದೆ ಮೋಟಾರು ಹೋಗುತ್ತಿದ್ದಾಗ ಮತ್ತೊಂದು ಹಳ್ಳಿ ಸಿಕ್ಕಿತು. ಆ ಹಳ್ಳಿಯ ಮುಂಭಾಗದಲ್ಲಿ ಮೆಟ್ಟಲುಗಳ ಮೇಲೆ ಒಂದು ತಗ್ಗಿನ ಮಾರಿಗುಡಿಯಲ್ಲಿ ಪಾಠ ಶಾಲೆಯನ್ನು ಮೇಷ್ಟು ಮಾಡುತ್ತಿದ್ದನು. ಮೋಟಾರನ್ನು ನಿಲ್ಲಿಸಿ ಸಾಹೇಬರೂ ರಂಗಣ್ಣನೂ ಸ್ಕೂಲ ಬಳಿಗೆ ಹೋದರು. ಮಾರಿಗುಡಿಯ ಎದುರಿನಲ್ಲಿ ಬಲಿ ಕಂಬದ ಹತ್ತಿರ ಎರಡು ದಿನದ ಹಿಂದೆ ಕುರಿಯೊಂದನ್ನು ಬಲಿ ಕೊಟ್ಟಿದ್ದರು. ಅದರ ರಕ್ತ ಅಲ್ಲಿ ನೆಲದ ಮೇಲೆ ಒಣಗಿ ಕಪ್ಪು ತಿರುಗಿ ಕರೆ ಕಟ್ಟಿತ್ತು ! ಬಲಿಕಂಬಕ್ಕೂ ಆ ರಕ್ತಾಭಿಷೇಕ ನಡೆದಿತ್ತು ! ಮಾರಿಗುಡಿಗೆ ಹತ್ತು ಮೆಟ್ಟು ಲುಗಳಿದ್ದು ವು. ಆ ಮೆಟ್ಟಲುಗಳ ತರುವಾಯ ತಗ್ಗಿನ ಕಲ್ಲುಮಂಟಪ ; ಸುಮಾರು ಐದೂವರೆ ಅಡಿ ಎತ್ತರ ಮತ್ತು ನಾಲ್ಕಂಕಣ ವಿಸ್ತಾರವುಳ್ಳದಾಗಿತ್ತು.

'ಸ್ಕೂಲು ಕಟ್ಟಡದೊಳಗೆ ಹೋಗಬೇಕಾದರೆ ಬೂಟ್ಸು ಬಿಚ್ಚಿ ಹೋಗಬೇಕು ಸಾರ್ ಎಂದು ರಂಗಣ್ಣ ಸೂಚನೆ ಕೊಟ್ಟನು. ಸಾಹೇಬರು ಮೆಟ್ಟಿಲ ಮೇಲೆ ಕುಳಿತು ಕೊಳ್ಳಲು ಹೋದಾಗ ಮೇಷ್ಟ್ರು ಮೇಲಿಂದ ಕುರ್ಚಿಯನ್ನು ತಂದು ಕೆಳಗಿಟ್ಟನು. ಹುಡುಗನೊಬ್ಬನು ಇನ್ ಸ್ಪೆಕ್ಟರಿಗೆ ಸ್ಟೂಲೊಂದನ್ನು ತಂದು ಕೆಳಗಿಟ್ಟನು. ಬೂಟುಗಳನ್ನು ಬಿಚ್ಚಿ ಮೇಲಕ್ಕೆ ಹತ್ತಿ ಹೋದರು. ಅಲ್ಲಿ ತಲೆಯೆತ್ತಿಕೊಂಡು ನಿಲ್ಲಲಾಗುತ್ತಿರಲಿಲ್ಲ, ಕೆಳಗಿದ್ದ ಕುರ್ಚಿ ಮತ್ತು ಸ್ಟೂಲು ಮೇಲಕ್ಕೆ ಬಂದುವು. ಸಾಹೇಬರುಗಳು ಅವುಗಳ ಮೇಲೆ ಕುಳಿತದ್ದಾಯಿತು. ಹುಡುಗರಿಗೆ ಹಲಗೆಗಳಾಗಲಿ ಬೆಂಚುಗಳಾಗಲಿ ಇರಲಿಲ್ಲ. ರಿಜಿಸ್ಟರುಗಳನ್ನು ಇಟ್ಟು ಕೊಳ್ಳುವುದಕ್ಕೆ ಪೆಟ್ಟಗೆ ಇರಲಿಲ್ಲ. ಏನನ್ನಾದರೂ ಬರೆಯುವುದಕ್ಕೆ ಬೋರ್ಡು ಇರಲಿಲ್ಲ.

'ಇದೇನು ಗ್ರಾಂಟ್ ಸ್ಕೂಲೇ ? ಕಟ್ಟಡವಿಲ್ಲ, ಸಾಮಾನಿಲ್ಲ !! ಎಂದು ಸಾಹೇಬರು ಕೇಳಿದರು.

ಅಲ್ಲ ಸ್ವಾಮಿ ! ಸರಕಾರಿ ಸ್ಕೂಲು.'

ಮತ್ತೆ ಹಲಗೆ ಬೆಂಚು ಏನೂ ಇಲ್ಲವಲ್ಲ ! ಇನ್ನೂ ಸಪ್ಲೈ ಆಗಲಿಲ್ಲವೊ ??