ಪುಟ:ರಂಗಣ್ಣನ ಕನಸಿನ ದಿನಗಳು.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಹೇಬರ ತನಿಖೆ

೧೬೩

ಖರ್ಚು ಎಷ್ಟಾಯಿತು ? ಮುಂತಾದ ವಿವರಗಳನ್ನು ಬರೆದಿಲ್ಲ - ಇತ್ಯಾದಿ. ರಂಗಣ್ಣನು ಹಲವಕ್ಕೆ ಸಮಾಧಾನಗಳನ್ನು ಹೇಳಿದಮೇಲೆ ಕರಡು ಪ್ರತಿಯಲ್ಲಿದ್ದ ಹಲವು ಅಂಶಗಳನ್ನು ಸಾಹೇಬರು ಹೊಡೆದು ಹಾಕಿಬಿಟ್ಟರು. ರಂಗಣ್ಣನಿಗೆ ಸಾಹೇಬರು ಕಟ್ಟುನಿಟ್ಟಿನವರೂ ಜಬರ್ದಸ್ತಿನವರೂ ಎಂದು ಕಂಡು ಬಂದರೂ ಅವರು ಸ್ವಲ್ಪ ಮಟ್ಟಿಗೆ ಗುಣಗ್ರಾಹಿಗಳೂ ಆಗಿದ್ದಾರೆಂದು ಸಮಾಧಾನವಾಯಿತು. ತನಿಖೆಯನ್ನೆಲ್ಲ ಮುಗಿಸಿಕೊಂಡು ಸಾಹೇಬರು ಮೋಟಾರನ್ನು ಹತ್ತಿದರು. ನಾನೀಗ ಹೆಡ್ ಕ್ವಾರ್ಟರಿಗೆ ಹಿಂದಿರುಗುತ್ತೇನೆ, ಪುನಃ ನಿಮ್ಮ ರೇಂಜಿಗೆ ಬರುತ್ತೇನೋ ಇಲ್ಲವೋ ತಿಳಿಯದು. ಬೇರೆ ಕಡೆಗೆ ವರ್ಗವಾಗುವ ನಿರೀಕ್ಷಣೆಯಿದೆ. ನೀವಿನ್ನೂ ಯುವಕರು ;ಸ್ವಲ್ಪ ಟ್ಯಾಕ್ಟ್ ಕಲಿತುಕೊಳ್ಳಿ; ಮುಂದೆ ದೊಡ್ಡ ಹುದ್ದೆಗೆ ಬರಬಹುದು. ಎಂದು ಹೇಳಿ ರಂಗಣ್ಣನ ಕೈ ಕುಲುಕಿ ಹೊರಟು ಹೋದರು.

ರಂಗಣ್ಣ ಮನೆಗೆ ಹಿಂದಿರುಗಿದಮೇಲೆ ಆ ದಿನ ಬೆಳಗ್ಗೆಯಿಂದ ಸಾಯಂಕಾಲದವರೆಗೂ ನಡೆದ ಎಲ್ಲ ಘಟನೆಗಳನ್ನೂ ಹೆಂಡತಿಗೆ ತಿಳಿಸಿದನು. ಆಕೆ, 'ಇಷ್ಟು ವರ್ಷಗಳಿಂದ ನಿಮ್ಮೊಡನೆ ಸಂಸಾರ ನಡೆಸುತಿದ್ದೇನೆ ! ನಿಮ್ಮ ಮರ್ವ ನಾನರಿಯೆನೇ ! ಬೆಳಗ್ಗೆ ನಿಮ್ಮ ಮುಖ ಸಪ್ಪಗಿತ್ತು ! ಅದಕ್ಕೋಸ್ಕರವೇ ನಾನು ಕೇಳಿದ್ದು, ಈಗ ನಿಮ್ಮ ಮುಖ ಎಂದಿನಂತೆ ಕಳಕಳಿಸುತ್ತಿದೆ' ಎಂದು ಹೇಳುತ್ತ, ಕಾಫಿ ತುಂಬಿದ ಬೆಳ್ಳಿಯ ಲೋಟವನ್ನು ಮುಂದಿಟ್ಟಳು.