ಪುಟ:ರಂಗಣ್ಣನ ಕನಸಿನ ದಿನಗಳು.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೮

ರಂಗಣ್ಣನ ಕನಸಿನ ದಿನಗಳು

ನೋಡಿ ಕೊಳ್ಳುವವರು ಯಾರೂ ಗತಿಯಿಲ್ಲ ! ಎಳೆಯ ಮಕ್ಕಳು ! ಎಲ್ಲಿ ಬಿಟ್ಟು ಬರಲಿ ಸ್ವಾಮಿ ??

ರಂಗಣ್ಣನ ಮುಖ ಜೋತುಬಿತ್ತು. ಕಣ್ಣುಗಳಲ್ಲಿ ನೀರು ತುಂಬಿಕೊಂಡುವು. ಮಾತು ಹೊರಡಲಿಲ್ಲ. ಒಂದು ಕ್ಷಣದಲ್ಲಿ ತನ್ನ ಸಂಸಾರದ - ಹೆಂಡತಿ ಮತ್ತು ಮಕ್ಕಳ – ದೃಶ್ಯ ಕಣ್ಣಿಗೆ ಕಟ್ಟಿತು. ತಾಯಿಯೆಂಬುವ ವಸ್ತು ವಿಲ್ಲದಿದ್ದರೆ ಸಣ್ಣ ಮಕ್ಕಳ ಗತಿಯೇನು ! ತನ್ನ ಗೃಹಲಕ್ಷ್ಮಿ ಇಲ್ಲದಿದ್ದರೆ ತನ್ನ ಮಕ್ಕಳ ಗತಿಯೇನು ! ದೇವರೇ ! ಸಾಹೇಬರು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವೇ ಇಲ್ಲ ! ಈ ಜುಲ್ಮಾನೆಯ ಪಾಪ ಅವರನ್ನು ಹೊಡೆಯದೇ ಬಿಡದು !' ಎಂದುಕೊಂಡನು.

ಮೇಷ್ಟೇ ! ಆ ದಿನ ನೀವು~ ಇವರು ನನ್ನ ಮಕ್ಕಳು, ತಬ್ಬಲಿಗಳು ಎಂದು ಸಾಹೇಬರಿಗೆ ಏಕೆ ತಿಳಿಸಲಿಲ್ಲ ?

ಸ್ವಾಮಿ! ಇದ್ದಕ್ಕಿದ್ದ ಹಾಗೆ ರಸ್ತೆಯಲ್ಲಿ ಮೋಟಾರು ಬಂದು ನಿಂತಿತು. ಸರಸರನೆ ಪರಂಗಿ ಟೋಪಿಯವರೊಬ್ಬರು ಒಳಕ್ಕೆ ಬಂದುಬಿಟ್ಟರು ! ಕುರ್ಚಿಯಮೇಲೆ ಕೂಡ ಕುಳಿತುಕೊಳ್ಳಲಿಲ್ಲ. ಅವರು ಸಾಹೇಬರೆಂಬುದೇ ನನಗೆ ತಿಳಿಯಲಿಲ್ಲ! ಹಾಜರಿ ಎಷ್ಟು ? ಎಂದು ಕೇಳಿದರು. ಮುವ್ವತ್ತು ನಾಲ್ಕು ಸ್ವಾಮಿ-ಎಂದು ಹೇಳಿದೆ. ಹಾಗೆಯೇ ಹುಡುಗರನ್ನು ಎಣಿಸಿ ಮುವ್ವತ್ತಾರು ಮಕ್ಕಳಿದ್ದಾರೆ ; ಹೆಚ್ಚಿಗೆ ಇರುವವರನ್ನು ಹೊರಕ್ಕೆ ಕಳಿಸಿ ಎಂದು ಕೋಪದಿಂದ ಹೇಳಿದರು. ನಾನು ನನ್ನ ಮಕ್ಕಳಿಗೆ- ಹೊರಕ್ಕೆ ಹೋಗಿ ಎಂದು ಹೇಳಿದೆ ಸ್ವಾಮಿ ! ಸಾಹೇಬರನ್ನು ನೋಡಿ ಮೊದಲೇ ಭಯಪಟ್ಟಿದ್ದು ವು ಮಕ್ಕಳು ! ಹೊರಕ್ಕೆ ಹೋಗುವ ಬದಲು ನನ್ನ ಹತ್ತಿರ ಬಂದು ನಿಂತುಕೊಂಡುವು ! ತಾಯಿ ಕೈ ಬಿಟ್ಟು ಹೋದ ಮಕ್ಕಳು ಸ್ವಾಮಿ ! ತಂದೆಯನ್ನು ಅಂಟಿಕೊಂಡಿರದೆ ಹೇಗೆ ಹೋಗುತ್ತವೆ ? ಹೇಳಿ, ಮಕ್ಕಳನ್ನೆಲ್ಲ ಆಟಕ್ಕೆ ಬಿಟ್ಟಿದ್ದರೆ ಅವರೂ ಬುಡಬುಡನೆ ಓಡಿಹೋಗುತ್ತಿದ್ದರು ! ಅಷ್ಟರಲ್ಲಿ ಸಾಹೇಬರು ಗಿರಕ್ಕನೆ ತಿರುಗಿಕೊಂಡು ಹೊರಟುಬಿಟ್ಟರು. ನಾನು-ಸ್ವಾಮಿ ! ಇವು ನನ್ನ ಮಕ್ಕಳು !!ತಬ್ಬಲಿಗಳು !~ ಎಂದು ಹೇಳುತ್ತಾ ಹಿಂದೆ ಹೋದೆ. ಅವರು ಏನನ್ನೂ ಕಿವಿಯ ಮೇಲೆ ಹಾಕಿಕೊಳ್ಳದೆ - ಸ್ಕೂಲು ಬಿಟ್ಟು ಬರಬೇಡಿ, ಹೋಗಿ, ಪಾಠ ಮಾಡಿ~ ಎಂದು ಗದರಿಸಿ