ಪುಟ:ರಂಗಣ್ಣನ ಕನಸಿನ ದಿನಗಳು.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೧೭

ಪರಾಶಕ್ತಿ ದರ್ಶನ

ರಂಗಣ್ಣ ಮನೆಯನ್ನು ಸೇರಿದಾಗ ಬೆಳಗ್ಗೆ ಹನ್ನೊಂದೂವರೆ ಗಂಟೆಯಾಗಿತ್ತು. ಆ ಬೈಸ್ಕಲ್ ಪ್ರಯಾಣದಿಂದ ಮೈಯೆಲ್ಲ ಬೆವರುತ್ತಿತ್ತು, ಬೆಳಗ್ಗೆ ತಾನು ಸ್ನಾನ ಮಾಡಿದವನಾಗಿದ್ದರೂ ಮತ್ತೊಮ್ಮೆ ಸ್ನಾನ ಮಾಡಬೇಕೆಂಬ ಅಪೇಕ್ಷೆ ಅವನಿಗುಂಟಾಯಿತು. ತನ್ನ ಉಡುಪುಗಳನ್ನು ಬಿಚ್ಚಿ ಪಂಚೆಯನ್ನುಟ್ಟು, ಟವಲುಗಳನ್ನು ಕೈಗೆ ತೆಗೆದುಕೊಳ್ಳುತ್ತಿದ್ದಾಗ ಅವನ ಹೆಂಡತಿ ಕೊಟಡಿಯೊಳಕ್ಕೆ ಬಂದಳು. ಆಕೆ ಬೆಳ್ಳಗೂ ತೆಳ್ಳಗೂ ಇದ್ದ ಚೆಲುವೆ. ಅಡಿಗೆಯ ಮನೆಯಿಂದ ಬಂದವಳಾದ್ದರಿಂದ ಒಲೆಯ ಕಾವಿನಿಂದ ಮುಖ ಕೆಂಪುವರ್ಣಕ್ಕೆ ಸಹಜವಾಗಿ ತಿರುಗಿತ್ತು. ಆದರೆ ಆ ಕೆಂಪು ಬಣ್ಣ ಎಂದಿಗಿಂತಲೂ ಆಗ ಹೆಚ್ಚಾಗಿದ್ದು ದು ರಂಗಣ್ಣನ ದೃಷ್ಟಿಗೆ ಬಿತ್ತು,

“ಆ ಟವಲ್ ಕೆಳಗಿಟ್ಟು ನನ್ನ ಮಾತಿಗೆ ಮೊದಲು ಉತ್ತರ ಕೊಡಿ ! ನಿಮ್ಮ ಇನ್ ಸ್ಪೆಕ್ಟರ್ ಗಿರಿ ಹಾಳಾಗ ! ಎಂದು ಆಕೆ ಕೋಪದಿಂದ ಹೇಳಿದಳು.

ರಂಗಣ್ಣನಿಗೆ ತನ್ನ ಹೆಂಡತಿಯ ನಡೆವಳಿಕೆ ಅರ್ಧ ವಾಗಲಿಲ್ಲ. ಆಕೆ ಸಾಮಾನ್ಯವಾಗಿ ಕೋಪ ಮಾಡಿಕೊಂಡಿದ್ದೆ ಇಲ್ಲ ; ಒರಟಾಗಿ ಮಾತನಾಡಿದವಳೂ ಅಲ್ಲ. ಈ ದಿನ ತಾನು ಶ್ರಮಪಟ್ಟು ಕೊಂಡು ಮನೆಗೆ ಬಂದರೆ ತನ್ನನ್ನು ಆದರಿಸುವುದಕ್ಕೆ ಬದಲು ಹೀಗೇಕೆ ಜಗಳಕ್ಕೆ ನಿಂತಿದ್ದಾಳೆ ? ಎಂದು ಆಲೋಚಿಸಿದನು. ಆದರೆ ಸಮಸ್ಯೆ ಪರಿಹಾರವಾಗಲಿಲ್ಲ. ರಂಗಣ್ಣ ಟವಲನ್ನು ಕುರ್ಚಿಯಮೇಲಿಟ್ಟು, 'ಇದೇತಕ್ಕೆ ಹೀಗೆ ಗದರಿಸುತ್ತೀಯೆ ? ನಾನೇನು ತಪ್ಪು ಮಾಡಿದೆ ?' ಎಂದು ಕೇಳಿದನು.

ಏನು ಮಾಡಿದಿರಾ ? ಕೈಯಲ್ಲಿ ಅಧಿಕಾರ ಇದೆಯೆಂದು ಹೆಣ್ಣು ಮೇಷ್ಟ್ರುಗಳಿಗೆಲ್ಲ ಹುಚ್ಚು ಹುಚ್ಚಾಗಿ ಜುಲ್ಮಾನೆ ಹಾಕುವುದೇ ನೀವು ?

ರಂಗಣ್ಣನಿಗೆ ಪ್ರಕರಣವೆಲ್ಲ ಅರ್ಥವಾಯಿತು. ' ಸೀತಮ್ಮನವರು ಬಂದು ನಿನ್ನ ಹತ್ತಿರ ಹೇಳಿಕೊಂಡರೆ ?