ಪುಟ:ರಂಗಣ್ಣನ ಕನಸಿನ ದಿನಗಳು.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಣ್ಣನ ಕನಸಿನ ದಿನಗಳು

ಮಾಡಿ, ಆ ಲೆಕ್ಕಗಳನ್ನೆಲ್ಲ ಬರೆದೂ ಬರೆದೂ ಸುಸ್ತಾಗಿ ಹೋಗುತ್ತೆ, ದಿನಾಗಲೂ ಒಂದೇ ವಿಧವಾದ ಕೆಲಸ. ಬೇಜಾರು ಹೇಳತೀರದು. ನನಗೇನೂ ಈ ಹಾಳು ಕೆಲಸ ಬೇಕಾಗಿರಲಿಲ್ಲ. ಆದರೂ ಗಂಟು ಬಿತ್ತು.”

'ಇದೇನು ಹೀಗೆ ಹೇಳುತ್ತೀಯೆ? ಈ ಕೆಲಸ ನಿನಗೆ ಬೇಕಾಗಿರಲಿಲ್ಲವೆ ? ನಿನ್ನ ಪ್ರಯತ್ನವಿಲ್ಲದೆಯೆ ಇದು ಕೈಗೂಡಿತೆ? ಈ ಆವುಟ ಯಾರ ಹತ್ತಿರ ಎತ್ತುತ್ತೀಯ ? ಈಚೆಗೆ ನೀನೂ ಸ್ವಲ್ಪ ಪಾಲಿಟಿಕ್ಸ್ (politics) ಕಲಿತ ಹಾಗೆ ಕಾಣುತ್ತದೆ.?'

'ಇಲ್ಲ ನನ್ನಪ್ಪ ! ಶಿವನಾಣೆ ರಂಗಣ್ಣ ! ನಾನು ಪ್ರಯತ್ನ ಪಡಲಿಲ್ಲ, ಈಗಲೂ ನನಗೆ ಬೇಕಾಗಿಲ್ಲ, ಬಿಟ್ಟು ಬಿಟ್ಟರೆ ನನ್ನ ಹಿಂದಿನ ಕೆಲಸಕ್ಕೆ ಈ ಕ್ಷಣ ಹೊರಟು ಹೋದೇನು. ಆದರೆ ನಮ್ಮ ಜನರ ಕಾಟ ಹೇಳತೀರದು. ಆ ಸಿದ್ದಪ್ಪ ನಮ್ಮ ಜನರಲ್ಲಿ ಮುಖಂಡ ಎಂದು ಹಾರಾಡುತ್ತಾನೆ. ದಿವಾನರನ್ನು ಅನುಸರಿಸಿಕೊಂಡು ನಡೆಯುತ್ತ ಪ್ರತಿಷ್ಠೆ ತೋರಿಸಿಕೊಳ್ಳುತ್ತಾನೆ. ಅವನು ನಮ್ಮನ್ನೆಲ್ಲ ಉದ್ದಾರ ಮಾಡುತ್ತೇನೆಂದು ತಿಳಿದುಕೊ೦ಡು ದಿವಾನರ ಹತ್ತಿರ ಹೋಗಿ ಅರಿಕೆ ಮಾಡಿಕೊಂಡನಂತೆ, ಅವರೋ ಬಹಳ ಬುದ್ಧಿವಂತರು, ಒಬ್ಬ ಮುಖಂಡನನ್ನು ಜೇಬಿಗೆ ಹಾಕಿಕೊಂಡ ಹಾಗಾಯಿತು ಎಂದುಕೊಂಡರು. ಸರ್ಕಾರಕ್ಕೇನೂ ನಷ್ಟವಿಲ್ಲ, ಕಂಪೆನಿಯವರು ಹೆಚ್ಚು ಸಂಬಳ ಕೊಡುತ್ತಾರೆ, ಆಗಬಹುದು ಎಂದು ಹೇಳಿ ಈ ಏರ್ಪಾಟು ಮಾಡಿ ಕೊಟ್ಟರು. ಸಿದ್ಧಪ್ಪ ನನ್ನ ಹತ್ತಿರ ಬಂದು,- ದಿವಾನರಿಗೆ ಶಿಫಾರಸು ಮಾಡಿ ನಿನಗೆ ಬೇರೆ ಕಡೆ ಕೆಲಸ ಮಾಡಿಸಿ ಕೊಟ್ಟಿದ್ದೇನೆ ; ತಿಂಗಳಿಗೆ ನೂರು ರೂಪಾಯಿ ಹೆಚ್ಚಾಗಿ ಬರುತ್ತೆ ; ಮುಂದೆ ಇನ್ನೂ ಹೆಚ್ಚಾಗಿ ಬರುತ್ತೆ ; ನಮ್ಮ ಕೋಮಿನ ನಾಲ್ಕು ಜನಕ್ಕೆ ಅನುಕೂಲಮಾಡಿಕೊಟ್ಟ ಪುಣ್ಯ ನನಗೆ ಬರಲಿ-- ಎಂದು ಹೇಳಿದನು. ಈ ಕೆಲಸ ನನಗೆ ಬೇಡ ಎಂದು ನಾನು ಹೇಳಿದೆ. ಅವನು- ನನ್ನ ಮರ್ಯಾದೆ ತೆಗೆಯಬೇಡ ತಿಮ್ಮರಾಯಪ್ಪ ! ನಮ್ಮ ಜನ ಹಿಂದೆ ಬಿದ್ದಿದ್ದಾರೆ ಸಹಾಯ ಮಾಡಬೇಕು ಎಂದು ನಾನು ಕೇಳಿ, ಅವರು ಆಗಲಿ ಎಂದು ಹೇಳಿ ಮಾಡಿ ಕೊಟ್ಟಮೇಲೆ, ನೀನು ಹೀಗೆ ಹಟಮಾಡಿದರೆ ಹೇಗೆ ? ಮತ್ತೆ ಅವರ ಹತ್ತಿರ