ಪುಟ:ರಂಗಣ್ಣನ ಕನಸಿನ ದಿನಗಳು.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೬

ರಂಗಣ್ಣನ ಕನಸಿನ ದಿನಗಳು

ಮನುಷ್ಯರದಂತೆ | ಮೇಲಕ್ಕೆ ಅರ್ಜಿಗಳು ಹೋಗಿ, ಸಾಹೇಬರು ಬಂದು ಖುದ್ದಾಗಿ ನೋಡಿ ಆಮೇಲೆ ಆಕೆಯನ್ನು ಇಲ್ಲಿಂದ ವರ್ಗಮಾಡಿಬಿಟ್ಟರು. ಈಚೆಗೆ ಆ ಕೌನ್ಸಿಲರ್ ದೊಡ್ಡ ಮನುಷ್ಯರು ನನ್ನ ಹತ್ತಿರ ಬಂದಿದ್ದರು. ಕರಿಯಪ್ಪನವರಿಂದ ಶಿಫಾರಸು ಪತ್ರ ತಂದಿದ್ದರು ; ಪುನಃ ಇಲ್ಲಿಗೇನೆ ಆಕೆಯನ್ನು ವರ್ಗಮಾಡಿಸಿಕೊಡಬೇಕು, ಆಕೆಯನ್ನು ನೋಡಿಕೊಳ್ಳುವವರು ಪರಸ್ಥಳದಲ್ಲಿ ಯಾರೂ ಇಲ್ಲ, ಬಹಳ ಕಷ್ಟ ಪಡುತ್ತಿದಾಳೆ-ಎಂದೆಲ್ಲ ಹೇಳಿದರು. ರಿಕಾರ್ಡುಗಳನ್ನು ನೋಡುತ್ತೇನೆ, ಆಲೋಚನೆ ಮಾಡುತ್ತೇನೆ- ಎಂದು ನಾನು ಅವರಿಗೆ ತಿಳಿಸಿದೆ. ಇದು ನಡೆದಿರುವ ವಿಚಾರ. ಆಕೆ ನನಗೆ ಕೆಲವು ಹುಚ್ಚು ಹುಚ್ಚು ಖಾಸಗಿ ಕಾಗದಗಳನ್ನು ಬರೆದಿದ್ದಳು. ನೇರವಾಗಿ ಕಾಗದ ಬರೆಯಕೂಡದು ; ರೇಂಜಿನ ಇನ್ಸ್ಪೆಕ್ಟರ್ ಮೂಲಕ ಅರ್ಜಿಗಳನ್ನು ಕಳಿಸಬೇಕು – ಎಂದು ಕಚೇರಿಯ ಮೂಲಕ ಒಂದೆರಡಕ್ಕೆ ಜವಾಬು ಹೋಯಿತು. ನನ್ನ ಹೆಂಡತಿಗೂ ಈ ವಿಷಯಗಳೆಲ್ಲ ಗೊತ್ತು. ಆಕೆ- ಈ ಹಾಳು ನೀತಿಗೆಟ್ಟ ಹೆಂಗಸರಿಗೆಲ್ಲ ಮೇಷ್ಟ್ರ ಕೆಲಸ ಏಕೆ ಕೊಡು ತಾರೆ ? ಹೆಣ್ಣು ಮಕ್ಕಳನ್ನು ಕೆಟ್ಟ ದಾರಿಗೆ ಎಳೆಯುವುದಿಲ್ಲವೇ ? ಶೀಲ ಚೆನ್ನಾಗಿರುವ ಹೆಂಗಸರಿಗೆ ಮಾತ್ರ ಕೆಲಸ ಕೊಡಬೇಕು ಎಂದು ಟೀಕಿಸಿದಳು. ಅಷ್ಟರಲ್ಲಿ ಅದು ಮುಗಿಯಿತು.

ಸ್ವಾಮಿ! ನನಗೇಕೋ ಬಹಳ ಆಶ್ಚರ್ಯವಾಗುತ್ತದೆ. ನಿಮ್ಮ ಮೇಲೆ ಹೀಗೆ ಪುಕಾರು ಹುಟ್ಟಿಸಿದ್ದಾರಲ್ಲ! ಎಂಥಾ ಜನ ! ಕೆಲವು ದಿನಗಳ ಹಿಂದೆ ಡೈರೆಕ್ಟರ್ ಸಾಹೇಬರು ಆಕೆಯನ್ನು ಕಚೇರಿಗೆ ಕರೆಸಿಕೊಂಡು ವಿಚಾರಣೆ ಮಾಡಿದರಂತೆ ! ಆಕೆ ಏನೇನು ಹೇಳಿಕೆಗಳನ್ನು ಕೊಟ್ಟಿದ್ದಾಳೋ ನಿಮ್ಮ ಮೇಲೆ !!

ರಂಗಣ್ಣನ ಮುಖದ ಕಳೆ ಇಳಿದುಹೋಯಿತು. ಆ ಹೊತ್ತಿಗೆ ಗೋಪಾಲ ಎರಡು ತಟ್ಟೆಗಳಲ್ಲಿ ಉಪಾಹಾರವನ್ನೂ ಎರಡು ಲೋಟಗಳಲ್ಲಿ ನೀರನ್ನೂ ತಂದು ಮೇಜಿನ ಮೇಲಿಟ್ಟನು. ಕಾರದವಲಕ್ಕಿ ಮತ್ತು ಮೈಸೂರುಪಾಕು ತಟ್ಟೆಯಲ್ಲಿದ್ದ ತಿಂಡಿಗಳು, ಗೌಡರು ಅದನ್ನು ನೋಡಿ, 'ಸ್ವಾಮಿ ! ಹೋಟೆಲಿಂದ ಇವುಗಳನ್ನೆಲ್ಲ ಏಕೆ ತರಿಸಿದಿರಿ ? ಇವುಗಳಿಗೆಲ್ಲ