ಪುಟ:ರಂಗಣ್ಣನ ಕನಸಿನ ದಿನಗಳು.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಣ್ಣನ ಕನಸಿನ ದಿನಗಳು

' ಹುಚ್ಚಣ್ಣ ನೀನು, ರಂಗಣ್ಣ ! ಶಿವನಾಣೆ ನಿನಗೆ ಹೇಳುತ್ತೇನೆ ಕೇಳು. ನೀನೆಲ್ಲೋ ಹುಡುಗರಿಗೆ ಪಾಠ ಹೇಳಿಕೊಂಡು ಇರುವ ಮನುಷ್ಯ. ಈಚೆಗೆ ಮೇಷ್ಟುಗಳಿಗೂ ನಾರ್ಮಲ್ ಸ್ಕೂಲಿನಲ್ಲಿ ಸ್ವಲ್ಪ ಪಾಠ ಹೇಳಿದ್ದೀಯೆ. ನಿನಗೆ ಹೊರಗಿನ ಪ್ರಪಂಚ ಏನೂ ತಿಳಿಯದು. ಸ್ಕೂಲು ಗೀಲು ಉದ್ದಾರವಾಗುವುದು ಇನ್ನು ಒಂದು ಶತಮಾನಕ್ಕೋ ಎರಡು ಶತಮಾನಕ್ಕೋ ! ಬ್ರಿಟಿಷರೆಲ್ಲ ಗಂಟು ಮೂಟೆ ಕಟ್ಟಿಕೊಂಡು ಓಡಿ ಹೋದರೆ, ನಮ್ಮ ಮಹಾತ್ಮ ಗಾಂಧಿ ಭರತಖಂಡದ ಚಕ್ರವರ್ತಿ ಆದರೆ, ಸೌರಾಷ್ಟ್ರ ಸೋಮನಾಥನ ದೇವಾಲಯ ಮತ್ತೆ ಊರ್ಜಿತವಾದರೆ ನಿನ್ನ ಸ್ಕೂಲು ಉದ್ಧಾರವಾಗುತ್ತದೆ ! ವಿದ್ಯಾಭಿವೃದ್ಧಿ ಆಗುತ್ತದೆ ! ?'

' ಅಷ್ಟೇನೆ ? - ಸರಿ, ಬಿಡು ; ಆಗದ ಹೋಗದ ಮಾತು. ಮತ್ತೆ ದೇಶದ ತುಂಬ ಅಷ್ಟೊಂದು ಸ್ಕೂಲುಗಳಿವೆ ; ಅಷ್ಟೊಂದು ಸಿಬ್ಬಂದಿ ಕೆಲಸ ಮಾಡುತ್ತಾ ಇದ್ದಾರೆ ; ಅಷ್ಟೊಂದು ಹಣ ಖರ್ಚು ಮಾಡುತ್ತಾ ಇದ್ದಾರೆ ; ನಾವು ಸಹ ಮೇಷ್ಟರುಗಳನ್ನು ತಯಾರುಮಾಡಿ ಕಳಿಸುತ್ತಾ ಇದ್ದೇವೆ.'

' ಆದರೇನು ರಂಗಣ್ಣ ! ಅಲ್ಲಿ ಇಲ್ಲಿ ಕೆಲವರು ಮೇಷ್ಟರುಗಳು ಭಯಭಕ್ತಿಗಳಿಂದ ಕೆಲಸ ಮಾಡಿ ಕೊಂಡು ಹೋಗುತ್ತಿದ್ದಾರೆ. ಆದರೆ ಹಲವರಿಗೆ ಪಾಠ ಹೇಳಿಕೊಡುವುದು ಗೊತ್ತಿಲ್ಲ. ಗ್ರಾಮಸ್ಥರಿಗೆ ಸುತರಾಂ ಶ್ರದ್ಧೆ ಹುಟ್ಟಿಲ್ಲ. ನಾನೂ ಸ್ಕೂಲ್ ತನಿಖೆಗಳನ್ನು ಮಾಡಿದೆ. ಏನಿದೆ ಆಲ್ಲಿ ನೋಡುವುದು? ಬರಿಯ ಸೊನ್ನೆ ! ಇನ್ನು ಸುಮ್ಮನೆ ಬಡ ಮೇಷ್ಟರ ಮೇಲೆ ಹಾರಾಡಿ ಪ್ರಯೋಜನವಿಲ್ಲ ಎಂದುಕೊಂಡು ಸುಮ್ಮನಾದೆ. ಉಪಾಧ್ಯಾಯರ ಸಭೆ ಮಾಡುವುದು, ತಿಂಡಿ ತೀರ್ಥ ಹೊಡೆಯುವುದು, ಒಂದೆರಡು ಭಾಷಣ ಮಾಡುವುದು, ವರದಿಗಳನ್ನು ಗೀಚಿ ಮೇಲಕ್ಕೆ ಕಳಿಸಿ ಬಿಡುವುದು, ತಿ೦ಗಳುಗುತ್ತಲೂ ಜೇಬಿಗೆ ಸಂಬಳ ಇಳಿಬಿಡುವುದು ಹೀಗೆ ರಾಮರಾಜ್ಯದಲ್ಲಿದ್ದ ಮನುಷ್ಯ ಇಲ್ಲಿಗೆ ಬಂದು ನರಳುತ್ತಾ ಇದ್ದೆನಲ್ಲ ! !

' ಆದರೂ ನೂರು ರೂಪಾಯಿ ಹೆಚ್ಚಾಗಿ ಬರುತ್ತಿದೆಯಲ್ಲ ತಿಮ್ಮರಾಯಪ್ಪ ! ನೀನು ಸಿದ್ದಪ್ಪನವರಿಗೆ ಕೃತಜ್ಞನಾಗಿರಬೇಕು.'