ಪುಟ:ರಂಗಣ್ಣನ ಕನಸಿನ ದಿನಗಳು.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೦

ರಂಗಣ್ಣನ ಕನಸಿನ ದಿನಗಳು

ಸಾಹೇಬರು ಹೇಳಿರುವಂತೆ ಊಟದ ಏರ್ನಾಟನ್ನು ಕೈ ಬಿಡೋಣ-ಎಂದು ಹೇಳಿದೆ. ಅದಕ್ಕೆ ಅವರು ಒಪ್ಪಲಿಲ್ಲ. ಹತ್ತು ಜನ ಮೇಷ್ಟರಿಗೆ ಅನ್ನ ಹಾಕುವ ಯೋಗ್ಯತೆ ಗಂಗೇಗೌಡನಿಗಿಲ್ಲ - ಎಂದು ಜನ ಆಡಿಕೊಳ್ಳುತ್ತಾರೆ ! ಮೇಷ್ಟ್ರುಗಳೂ ತಿಳಿದು ಕೊಳ್ಳುತ್ತಾರೆ ! ಊಟದ ಏರ್ಪಾಟನ್ನು ಇಟ್ಟುಕೊಳ್ಳೋಣ. ದೊಡ್ಡ ಸಾಹೇಬರನ್ನು ಇಲ್ಲಿಗೆ ಬರಮಾಡಿಕೊಳ್ಳಬೇಕು, ಮಿಡಲ್ ಸ್ಕೂಲನ್ನು ಕೊಡುವಂತೆ ಕೇಳಿಕೊಳ್ಳಬೇಕು ಎಂದು ಮನಸ್ಸಿನಲ್ಲಿತ್ತು. ಈ ಸಂದರ್ಭದಲ್ಲಿಯೇ ಅವರನ್ನೂ ಬರಮಾಡಿಕೊಳ್ಳೋಣ. ಎರಡು ಕೆಲಸಗಳೂ ನೆರವೇರಲಿ ; ಬನ್ನಿ , ಹೋಗಿ ಬರೋಣ ಎಂದು ಹೇಳಿದರು. ಅವರು ಈ ಊರಿನ ಮುಖಂಡರು ಸ್ವಾಮಿ ! ತಮಗೂ ಗೊತ್ತಿದೆ. ಬಹಳ ದೊಡ್ಡ ಮನುಷ್ಯರು, ಉದಾರಿಗಳು; ದೇವರಲ್ಲಿಯೂ ಬ್ರಾಹ್ಮಣರಲ್ಲಿಯೂ ಭಕ್ತಿಯುಳ್ಳವರು. ಹಲವಾರು ಉಪಾಧ್ಯಾಯರು ಉಪಕಾರ ಪಡೆದಿದ್ದಾರೆ. ನಾನಂತೂ ಅವರಿಗೆ ಚಿರ ಋಣಿಯಾಗಿದ್ದೇನೆ. ಅವರ ಮಾತನ್ನು ಮೀರುವುದಕ್ಕಾಗದೆ ಅವರ ಜೊತೆಯಲ್ಲಿ ಹೋಗಿದ್ದೆ ಕ್ಷಮಿಸಬೇಕು ! ಗಂಗೇಗೌಡರೇ ತಮ್ಮನ್ನು ಕಂಡು: ಎಲ್ಲವನ್ನೂ ವಿವರಿಸುತ್ತಾರೆ. ತಮ್ಮ ವಿಷಯದಲ್ಲಿ ಅವರು ಬಹಳ ಗೌರವವನ್ನಿಟ್ಟಿದ್ದಾರೆ. !'

ಮೇಲಿನ ಸಮಾಧಾನವನ್ನು ಕೇಳಿದಮೇಲೆ ರಂಗಣ್ಣನಿಗೆ ಕೋಪ ಬಹುಮಟ್ಟಿಗೆ ಇಳಿಯಿತು. ತಿಮ್ಮಣ್ಣ ಭಟ್ಟನ ಕೈವಾಡ ಏನೂ ಇಲ್ಲ ಎನ್ನಿಸಿತು. ಆದರೂ ತನ್ನ ಬಿಗುಮಾನವನ್ನು ಬಿಟ್ಟು ಕೊಡಲಿಲ್ಲ ; ಮೌನವಾಗಿ ಕುಳಿತೇ ಇದ್ದನು. ತಿಮ್ಮಣ್ಣ ಭಟ್ಟನು ಎಳನೀರಿನ ಲೋಟವನ್ನು ಮುಂದಿಟ್ಟು, 'ಸ್ವಾಮಿಯವರು ಸ್ವೀಕರಿಸಬೇಕು !' ಎಂದು ಕೈ ಮುಗಿದನು. ರಂಗಣ್ಣನು ಲೋಟವನ್ನು ಕೈಗೆ ತೆಗೆದುಕೊಂಡನು, ಇನ್ಸ್ಪೆಕ್ಟರು ತನ್ನ ವಿಚಾರದಲ್ಲಿ ಪ್ರಸನ್ನರಾದರೆಂದು ಹೆಡ್‌ಮೇಷ್ಟರಿಗೆ ಧೈರ್ಯ ಬಂತು. ಸ್ವಾಮಿ ! ಗಂಗೇಗೌಡರು ನನಗೆ ಬಹಳ ಉಪಕಾರಮಾಡಿದ್ದಾರೆ. ಈ ಕಾಲದಲ್ಲಿ ಬಡಮೇಷ್ಟರುಗಳ ಕಷ್ಟ ದುಖಗಳನ್ನು ವಿಚಾರಿಸುವವರಾರು ? ಎಂದನು. ರಂಗಣ್ಣನು ಎಳನೀರ ರುಚಿಯನ್ನು ನೋಡುತ್ತ, ನೋಡುತ್ತ, ಆದರ ಸಿಹಿ ನಾಲಗೆಗೇರುತ್ತ ಹೋದಹಾಗೆಲ್ಲ ಹೆಚ್ಚು ಹೆಚ್ಚು ಪ್ರಸನ್ನ