ಪುಟ:ರಂಗಣ್ಣನ ಕನಸಿನ ದಿನಗಳು.pdf/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೪

ರಂಗಣ್ಣನ ಕನಸಿನ ದಿನಗಳು

ಬಡವರು ಗೋಳಾಡುತ್ತಿದ್ದರೆ ನಮಗೇನು ಸುಖ ಸ್ವಾಮಿ ? ತಾವು ಹೇಳಿ.?

'ನಿಮ್ಮ ಮುಖಂಡರುಗಳಿಗೆ ಅದನ್ನು ಹೇಳಿ ಗೌಡರೇ !?

'ಅಯ್ಯೋ ಸ್ವಾಮಿ ! ಆ ಮುಖಂಡರ ಮಾತನ್ನು ನನಗೆ ಹೇಳಬೇಡಿ, ನಮ್ಮ ದೇಶ ಉದ್ಧಾರವಾಗಬೇಕಾದರೆ ಮೇಷ್ಟರಿಗೆ ಕೈತುಂಬ ಸಂಬಳ, ಹೊಟ್ಟೆ ತುಂಬ ಅನ್ನ ಕೊಡಬೇಕು. ಅವರೇ ಅಲ್ಲವೇ ಜನರಿಗೆ ವಿದ್ಯಾಬುದ್ಧಿಗಳನ್ನು ಕಲಿಸುವ ಗುರುಗಳು ! ವಿದ್ಯೆಯಿಲ್ಲದ ಜನ ಏನು ರಾಜಕೀಯ ತಿಳಿದುಕೊಂಡಾರು ? ಮುಖ್ಯ ವಾಗಿ ನೋಡಿ : ಒಂದು ಕಡೆ ಉಪಾಧ್ಯಾಯರ ಹಿತಚಿಂತನೆ, ಇನ್ನೊಂದು ಕಡೆ ರೈತರ ಹಿತಚಿಂತನೆ ಇವೆರಡನ್ನೂ ಸಾಧಿಸಿದರೆ ದೇಶ ಉದ್ದಾರವಾಗುತ್ತದೆ. ಹೊಟ್ಟೆಗೆ ಹಿಟ್ಟು ಕಾಣಿಸುವ ಜನರು ದುಡಿಯೋ ರೈತರು. ಇವರಿಗೆ ತಿಳಿವಳಿಕೆ ಕೂಡಬೇಕು ; ಹೆಚ್ಚಾಗಿ ಬೆಳೆಯುವ ಹಾಗೆ ಮಾಡಬೇಕು ; ಅವರಿಗೆ ಸಾಲ ಸೋಲಗಳಿಲ್ಲದಂತೆ ನೋಡಿಕೊಳ್ಳ ಬೇಕು. ಈಗ ನೋಡಿ ? ನಮ್ಮ ಒಕ್ಕಲಿಗ ಜನಾಂಗ ಸರಕಾರಿ ಕೆಲಸಕ್ಕೆ ಆಶೆ ಪಟ್ಟು, ಇದ್ದ ಬದ್ದ ಹಣವನೆಲ್ಲ ಓದಿಗೆ ಹಾಕಿ, ಪೇಟೆಗಳಿಗೆ ಹೋಗಿ ಷೋಕಿ ಕಲಿತುಕೊಂಡು, ಸರಕಾರದಲ್ಲಿ ಗುಮಾಸ್ತೆಯರಾಗಿಯೋ ಮೇರ್ಷ್ಟುಗಳಾಗಿ ನರಳುತ್ತಿದ್ದಾರೆ ! ಜಮೀನುಗಳೆಲ್ಲ ಬಂಜರು ಬಿದ್ದು ವು ; ದುಡಿಯೋ ಜನ ಕಡಿಮೆ ಆದರು. ಇನ್ನು ಬೆಳೆ ಕಡಮೆಯಾಗದೆ ಏನಾದೀತು ? ಹೇಳಿ ಸ್ವಾಮಿ ! ಅಧಿಕಾರಿಗಳ ತಿರುಗಾಟ ಹೇಳ ತೀರದು ; ಗಾಮಾಭಿವೃದ್ಧಿಯ ಉಪನ್ಯಾಸಗಳನ್ನು ಕೇಳತೀರದು ; ರಸ್ತೆಯ ಪಕ್ಕದಲ್ಲಿ ನಾಲ್ಕು ಸಣಕಲು ಒಣಕಲು ಗಿಡಗಳನ್ನು ನೆಟ್ಟು ಗ್ರಾಮ ಪಂಚಾಯತಿ ಫೋರೆಸ್ಟ್ ಎಂದು ಹಾಕಿರುವ ಬೋರ್ಡನ್ನು ನೋಡತೀರದು. ನಮ್ಮ ಮುಖಂಡರು ಮಾಡುತ್ತಿರುವುದೇನು ! ಕೋಮುವಾರು ದ್ವೇಷ ಬೆಳಸೋದು, ತಮ್ಮ ಕಡೆಯ ನಾಲ್ಕು ಜನಕ್ಕೆ ಪ್ರೊಬೆಷನರಿ ಕೆಲಸ ಕೊಡಿ ಸ್ವಾಮಿ ! ಎಂದು ಹಲ್ಲುಗಿರಿಯುತ್ತ ದಿವಾನರಿಗೆ ಔತಣ ಕೊಡಿಸೊದು, ಅವರ ಮನೆಯ ಬಾಗಿಲು ಕಾಯೋದು !'

'ಗೌಡರೇ ! ನಾನು ಸರಕಾರಿ ನೌಕರ ; ನಿಮಗೆ ತಿಳಿದಿದೆಯಲ್ಲ, ನನಗೇಕೆ ಈ ರಾಜಕೀಯದ ವಿಚಾರ ?'