ಪುಟ:ರಂಗಣ್ಣನ ಕನಸಿನ ದಿನಗಳು.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗನಾಥಪುರದ ಗಂಗೇಗೌಡರು

೨೦೫

'ಮುಖಂಡರ ಮಾತು ಬಂತಲ್ಲ ಸ್ವಾಮಿ | ಅದಕ್ಕೋಸ್ಕರ ಹೇಳಿದೆ ಮನಸ್ಸಿಗೆ ಬೇಜಾರು ಪಟ್ಟು ಕೊಳ್ಳಬೇಡಿ. ಹಳ್ಳಿಗಳಲ್ಲೇ ಇದ್ದುಕೊಂಡು ನಾವು ಮಾಡೋ ಕೆಲಸಗಳು ಬಹಳ ಇವೆ. ನಾನು ಸನಿಕೆ ಗುದ್ದಲಿ ತೆಕ್ಕೊಂಡು ರಸ್ತೆಯ ರಿಪೇರಿಗೆ ಹೊರಟರೆ, ನನ್ನ ರೈತರು ನೂರಾರು ಜನ ನಾನು ತಾನು ಎಂದು ಕೆಲಸಕ್ಕೆ ಬರುವುದಿಲ್ಲವೆ ? ದಿವಾನರ ಪಕ್ಕದಲ್ಲಿ ನಿಂತುಕೊಂಡು, ಕೈ ಕುಲುಕಿಸಿಕೊಂಡು, ರಸ್ತೆಯ ರಿಪೇರಿಯನ್ನು ಹಳ್ಳಿಯವರೇ ಮಾಡಿಕೊಳ್ಳಿ! ನಿಮ್ಮ ಕಾಲಮೆಲೇ ನೀವು ನಿಂತುಕೊಳ್ಳಬೇಕು :-ಎಂದು ಬರಿಯ ಬೋಧೆಮಾಡಿದರೆ ದೇಶಕ್ಕೆ ಪ್ರಯೋಜನ ಏನು? ಕಾಲಮೇಲೆ ನಿಂತುಕೊಂಡಿಲ್ಲದೆ ಜನ ಕೈ ಮೇಲೆ ನಿಂತಿದ್ದಾರೆಯೇ ?

'ಮುಂದೆ ಒಳ್ಳೆಯ ಕಾಲ ಬರುತ್ತದೆ ಗೌಡರೆ! ಪ್ರಜೆಗಳಿಗೆ ಅಧಿಕಾರ ಬಂದಾಗ ಎಲ್ಲವೂ ಚೆನ್ನಾಗಿ ನೆರವೇರುತ್ತವೆ. ಈಗ ನಿಮಗೆ ನಾನು ತಿಳಿಸಬೇಕಾದ ಒಂದು ಸಂಗತಿ ಇದೆ : ನಿ?ವು ನಮ್ಮ ಉಪಾಧ್ಯಾಯರ ವಿಚಾರದಲ್ಲಿ ಬಹಳ ಸಹಾನುಭೂತಿಯಿಂದ ನಡೆದುಕೊಳ್ಳುತ್ತಾ ಇದ್ದೀರಿ; ಅನೇಕರಿಗೆ ಸಹಾಯ ಮಾಡಿದ್ದಿರಿ ; ತಿಮ್ಮಣ್ಣ ಭಟ್ಟರನ್ನು ಉದ್ಧಾರ ಮಾಡಿದ್ದೀರಿ ; ನಮ್ಮ ದೇಶಕ್ಕೆ ಆದರ್ಶಪ್ರಾಯ ರೂ ಭೂಷಣಪ್ರಾಯರೂ ಆಗಿದ್ದೀರಿ. ನಿಮಗೆ ನಾನು ಬಹಳ ಕೃತಜ್ಞನಾಗಿದ್ದೇನೆ.'

'ಸ್ವಾಮಿ ! ನನ್ನನ್ನು ಹೀಗೆಲ್ಲ ತಾವು ಸ್ತೋತ್ರ ಮಾಡಬಾರದು. ಸ್ತೋತ್ರ ಕೇಳಿದರೆ ಬುದ್ಧಿ ಕೆಟ್ಟು ಹೋಗುತ್ತದೆ ! ನಾನು ಮಾಡಿರುವ ಉಪಕಾರ ಏನು ? ಉದ್ಧಾರ ಏನು ? ಏನೂ ಇಲ್ಲ. ಅವರವರು ದುಡಿದು ಸಂಪಾದನೆ ಮಾಡುತ್ತಾರೆ. ಬಿಟ್ಟಿಯಾಗಿ ನಾನೇನೂ ಕೊಟ್ಟಿಲ್ಲ.'

'ನೀವು ಹೀಗೆಯೇ ಹೇಳಬೇಕು. ದುಡಿಯುವುದಕ್ಕೆ ಎಷ್ಟೋ ಮಂದಿ ಸಿದ್ಧರಾಗಿದ್ದಾರೆ. ದುಡಿಸಿಕೊಂಡು ಕೈಗೆ ಹಣ ಕೊಡುವ ಮಹಾನುಭಾವರು ವಿರಳ! ಈಗ ತಿಮ್ಮಣ್ಣ ಭಟ್ಟರ ವಿಚಾರದಲ್ಲಿ ಒಂದು ಮಾತು : ಅವರು ನಿಮ್ಮ ಹತ್ತಿರ ಹಾಗೆ ಗುಮಾಸ್ತ ಕೆಲಸ ಮಾಡುವುದು ನಮ್ಮ ಸರಕಾರದ ರೂಲ್ಸಿಗೆ ವಿರುದ್ಧವಾದುದು. ಮೇಲಿನವರ ಅಪ್ಪಣೆ ಇಲ್ಲದೆ ಹಾಗೆಲ್ಲ ಬೇರೆ ಕಡೆ ಸರಕಾರಿ ನೌಕರನು ದುಡಿಯಕೂಡದು, ಸಂಪಾದಿಸಕೂಡದು,