ಪುಟ:ರಂಗಣ್ಣನ ಕನಸಿನ ದಿನಗಳು.pdf/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೬

ರಂಗಣ್ಣನ ಕನಸಿನ ದಿನಗಳು

'ಸ್ವಾಮಿ | ಒಳ್ಳೆಯ ರೂಲ್ಕು ಮಾತು ಆಡುತ್ತಿದ್ದೀರಲ್ಲ ! ನನ್ನ ಕೈಕೆಳಗೆ ಕೂಲಿ ಆಳುಗಳು ಕೆಲಸ ಮಾಡುತ್ತಿದಾರೆ ಸ್ವಾಮಿ ! ಎರಡು ಹೊತ್ತು ಹಿಟ್ಟು, ಹೊದೆಯುವುದಕ್ಕೆ ಕಂಬಳಿ. ಕೈಗೆ ದುಡ್ಡು-ಆ ಆಳುಗಳಿಗೆ ನಾನು ಕೊಡುತ್ತಿದ್ದೇನೆ. ಸರಕಾರಾನೂ ಮೇಷ್ಟ ಸಂಸಾರಕ್ಕೆ ದಿನವೂ ಊಟ ಹಾಕಿ, ವರ್ಷಕ್ಕೆ ಬೇಕಾಗುವ ಬಟ್ಟೆ ತೆಗೆದು ಕೊಟ್ಟು, ತಿಂಗಳಿಗೆ ಹದಿನೈದು ಇಪ್ಪತ್ತು ರುಪಾಯಿ ಕೈಗೆ ಕೊಡಲಿ ಸ್ವಾಮಿ ! ಹೊಟ್ಟೆಗೆ ಹಿಟ್ಟು ಹಾಕದೆ, ಮೈಗೆ ಬಟ್ಟೆ ಕೊಡದೆ, ಕೂಲಿ ಆಳುಗಳಿಗಿಂತ ಕೀಳಾಗಿ ಕಾಣುತ್ತೀರಿ ರೂಲ್ಸು ಮಾತು ಆಡುತ್ತೀರಿ !!

'ಸಂಬಳ ಸಾರಿಗೆಗಳನ್ನೆಲ್ಲ ಸರಕಾರದವರು ಆಯಾ ಕೆಲಸಕ್ಕನುಗುಣವಾಗಿ ನಿಗದಿ ಮಾಡಿದ್ದಾರೆ. ಅವರನ್ನು ಟೀಕಿಸಬಾರದು ಗೌಡರೇ ??

'ಅದೇನು ಸ್ವಾಮಿ ಸರಕಾರದವರು ! ಎಂದು ದೊಡ್ಡದಾಗಿ ಹೇಳುತ್ತೀರಿ, ಸರಕಾರ ಎಂದರೆ ಯಾರು ಸ್ವಾಮಿ? ಸಾವಿರಾರು ರುಪಾಯಿಗಳನ್ನು ತಮತಮಗೆ ಸಂಬಳವಾಗಿ ನಿಗದಿ ಮಾಡಿಕೊಂಡು ಮೋಟಾರುಗಳಲ್ಲಿ ಓಡಾಡುತ್ತ, ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಮಾಡುತ್ತ, ಹಗಲೆಲ್ಲ ಜಬರ್ದಸ್ತಿ ಮಾಡಿ ರಾತ್ರಿಯೆಲ್ಲ ಮೈ ಮರೆತು ಬಿದ್ದು ಕೊಂಡಿರುವ, ಹ್ಯಾಟು ಬೂಟುಗಳ ಸರಿಗೆ ರುಮಾಲು ಸೂಟುಗಳ ದೊಡ್ಡ ಮನುಷ್ಯರ ಕ್ಲಬ್ಬು ತಾನೇ ಸ್ವಾಮಿ ! ಬಡ ಮೇಷ್ಟರುಗಳ ಕಷ್ಟ ಅವರಿಗೆ ಗೊತ್ತೇ? ಜೀವನಕ್ಕೆ ಆಗುವಷ್ಟು, ಸಂಸಾರಕ್ಕೆ ಸಾಕಾಗುವಷ್ಟು, ನಿಗದಿಮಾಡಿ ಎಲ್ಲರಿಗೂ ಒಂದು ಮಟ್ಟಕ್ಕೆ ಕಡಮೆಯಿಲ್ಲದೆ ಸಂಬಳ ಕೊಡಿ ಸ್ವಾಮಿ ! ಆಮೇಲೆ ರೂಲ್ಸು ಮಾತನಾಡಿ !'

'ನಾಳೆ ನಮಗೆ ಸ್ವರಾಜ್ಯ ಬಂದಾಗ ನೀವು ಪ್ರಧಾನಿಗಳಾಗಿ ಬರಬೇಕು ಗೌಡರೇ !'

'ಅಯ್ಯೋ ಸ್ವಾಮಿ ! ಅದೆಲ್ಲ ನಮಗೇಕೆ ? ನಾನು ಒಕ್ಕಲ ಮಗ ! ದುಡಿಯೋ ರೈತ! ಮುಂದೆ ಪ್ರಜಾಧಿಕಾರ ಬಂದರೂ ಕಚ್ಚಾಟ ತಪ್ಪೋದಿಲ್ಲ ಸ್ವಾಮಿ! ದ್ರೌಪದಿಗೆ ಐದು ಜನ ಗಂಡಂದರಿದ್ದು ಒಬ್ಬೊಬ್ಬರು ಒಂದೊಂದು ವರ್ಷ ಸರದಿಯಮೇಲೆ ಗಂಡನಾಗಿರಬೇಕು ಎಂದು ನಿಗದಿ ಮಾಡಿದ್ದರಲ್ಲಾ!