ಪುಟ:ರಂಗಣ್ಣನ ಕನಸಿನ ದಿನಗಳು.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಣ್ಣನ ಕನಸಿನ ದಿನಗಳು

ಬಡಾವಣೆಗೆ ಹೋಗಬೇಕಾಗಿತ್ತು. ಅವನು ಅತ್ತಕಡೆಗೆ ಹೊರಟು ಹೋದನು.

ರಂಗಣ್ಣ ರಾತ್ರಿ ಊಟ ಮಾಡಿ ಹೆಂಡತಿಯೊಡನೆ ಆ ದಿನ ಸಂಜೆ ನಡೆದ ವೃತ್ತಾಂತವನ್ನೆಲ್ಲ ಹೇಳಿದನು. ಆಕೆ, " ಅಯ್ಯೋ ! ಭಾಗ್ಯವನ್ನು ನಾವು ಕೇಳಿಕೊಂಡು ಬಂದಿದ್ದೇವೆಯೆ ? ಅದಕ್ಕೆಲ್ಲ ಪುಣ್ಯ ಮಾಡಿರಬೇಕು. ಅಮಲ್ದಾರರ ಹೆಂಡತಿ, ಪೊಲೀಸ್ ಇನ್ಸ್ಪೆಕ್ಟರ ಹೆಂಡತಿ- ಅವರ ಜೊತೆಯಲ್ಲಿ ಸರಿಸಮನಾಗಿ ಊರಲ್ಲಿ ಓಡಾಡುವುದನ್ನು ಈ ಜನ್ಮದಲ್ಲಿ ಕಾಣೆ'-ಎಂದು ಚಿಂತಾಕ್ರಾಂತಳಾಗಿ ಹೇಳಿದಳು, ಆ ರಾತ್ರಿ ರಂಗಣ್ಣನಿಗೆ ಸರಿಯಾಗಿ ನಿದ್ದೆ ಬರಲಿಲ್ಲ. ಕನಸುಗಳು ಮತ್ತು ಕಲ್ಪನೆಗಳು ತಲೆಯಲ್ಲಿ ತುಂಬಿಕೊಳ್ಳುತ್ತಿದ್ದುವು. ತನಗೆ ಇನ್ ಸ್ಪೆಕ್ಟರ್‌ಗಿರಿ ಆಯಿತೆಂದೇ ಕನಸು ಬಿತ್ತು. ತಾನು ಹಳ್ಳಿಯ ಕಡೆ ಸರ್ಕಿಟು ಹೋದಂತೆಯೂ ತಿಮ್ಮರಾಯಪ್ಪ ವರ್ಣಿಸಿದ ಹಾಗೆ ಗ್ರಾಮಸ್ಥರು ಮರದ ಕೆಳಗೆ ಗುಂಪು ಸೇರಿ ಹೂವಿನ ಹಾರ, ಹಣ್ಣುಗಳು, ಎಳನೀರು ಮೊದಲಾದುವನ್ನು ಇಟ್ಟು ಕೊಂಡು ಕಾದಿದ್ದಂತೆಯೂ ಕಾಫಿ ಉಪ್ಪಿಟ್ಟು ದೋಸೆಗಳು ಬಾಳೆಯೆಲೆಯ ಮುಸುಕಿನಲ್ಲಿ ಸೇರಿಕೊಂಡು ವಾಸನೆ ಬೀರುತ್ತಿದ್ದಂತೆಯೂ ಸುಖ ಸ್ವಪ್ನವನ್ನು ಕಂಡು ರಾತ್ರಿಯನ್ನು ಕಳೆದನು.