ಪುಟ:ರಂಗಣ್ಣನ ಕನಸಿನ ದಿನಗಳು.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೨

ಕನಸು ದಿಟವಾಯಿತು

ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ--- ಸರಿ, ಇನ್ನು ಈ ಹುಚ್ಚೊಂದು ನಿಮಗೆ ಹತ್ತಿತೆ ? ಸಾಕು. ಕಾಫಿ ಕುಡಿದು ಬಿಟ್ಟು ಏನಾದರೂ ತರಕಾರಿ ತಂದುಹಾಕಿ. ಹೋಗಿ ಸ್ನೇಹಿತರ ಮನೆಯಲ್ಲಿ ಕುಳಿತುಬಿಟ್ಟು ಈ ಹುಚ್ಚನ್ನೆಲ್ಲಾ ಬಿಚ್ಚಿ ಊಟದ ಹೊತ್ತಿಗೆ ಬರಬೇಡಿ ' --- ಎಂದು ತಾತ್ಸಾರದಿಂದ ಹೇಳಿದಳು. ರಂಗಣ್ಣನು ತರಕಾರಿಯನ್ನೆನೊ ತಂದು ಮನೆಗೆ ಹಾಕಿದನು. ಆದರೆ ಸ್ನೇಹಿತರ ಮನೆಗೆ ಹೋಗದೆ ಬಿಡಲಿಲ್ಲ. ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಮನೆಗೆ ಹಿಂದಿರುಗಿದನು. ಆವನು ಮನೆಯನ್ನು ಸೇರುವುದಕ್ಕೂ ಪಕ್ಕದ ಮನೆಯಿಂದ ಟಪಾಲಿನವನು ಹೊರಕ್ಕೆ ಬರುವುದಕ್ಕೂ ಸರಿಹೋಯಿತು. ಟಪಾಲಿನವನು ಒಂದು ಸರ್ಕಾರಿ ಲಕ್ಕೋಟೆಯನ್ನು ಕೈಗೆ ಕೊಟ್ಟು ಹೊರಟು ಹೋದನು. ಲಕ್ಕೋಟೆ ಡೆಪ್ಯುಟಿ ಡೈರೆಕ್ಟರವರ ಕಚೇರಿಯಿಂದ ಬಂದದ್ದು. ಒಡೆದು ನೋಡುತ್ತಾನೆ ! ಜನಾರ್ದನ ಪುರಕ್ಕೆ ಇನ್ ಸ್ಪೆಕ್ಟರಾಗಿ ವರ್ಗ ಮಾಡಿದ್ದಾರೆ! ರಜದಿಂದ ಹಿಂದಿರುಗಿ ಬರಬೇಕೆಂದೂ ಕೂಡಲೆ ಹೋಗಿ ಅಧಿಕಾರ ವಹಿಸಿಕೊಳ್ಳಬೇಕೆಂದೂ ತುರ್ತು ಅಜ್ಞೆ ಮಾಡಿದ್ದಾರೆ! ರಂಗಣ್ಣ ತನ್ನ ಕಣ್ಣುಗಳನ್ನು ನಂಬಲಿಲ್ಲ. ತಾನು ಎಲ್ಲಿರುವನೆಂಬ ಅರಿವೂ ಅವನಿಗೆ ಆಗಲಿಲ್ಲ. ಅದೇನು ಸಾಚಾನೇ ಖೋಟಾನೇ ಎಂದು ಎರಡು ಮೂರು ಬಾರಿ ನೋಡಿದನು, ಓದಿದನು. ಎಲ್ಲವೂ ಸಾಚಾ, ಟೈಪಾಗಿದೆ, ಸಾಹೇಬರ ರುಜುವಾಗಿದೆ, ಅಸಿಸ್ಟೆಂಟರ ರುಜು ಬಿದ್ದಿದೆ. ತನ್ನದೊಂದೇ ವರ್ಗವಲ್ಲ ; ಇತರರ-ನಾಲೈದು ಮಂದಿಯ ವರ್ಗಗಳೂ ಇವೆ. ರಂಗಣ್ಣನಿಗೆ ಇದೇನೋ ದೈವಮಾಯೆ ಎನ್ನಿಸಿತು. ಒಳಕ್ಕೆ ಹೋಗಿ ಹೆಂಡತಿಗೆ