ಪುಟ:ರಂಗಣ್ಣನ ಕನಸಿನ ದಿನಗಳು.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ರಂಗಣ್ಣನ ಕನಸಿನ ದಿನಗಳು

ಲಕ್ಕೋಟೆಯನ್ನೂ ವರ್ಗದ ಆರ್ಡರನ್ನೂ ತೋರಿಸಿ ಸಮಾಚಾರವನ್ನು ತಿಳಿಸಿದನು. ಆಕೆ ನಂಬಲಿಲ್ಲ. ತನ್ನನ್ನು ಗೇಲಿ ಮಾಡುವುದಕ್ಕಾಗಿ ಗಂಡನು ಹಾಗೆ ಮಾಡುತ್ತಿದ್ದಾನೆಂದು ಆಕೆ ಬಗೆದಳು. ಆ ಮೇಲೆ ಅದು ತಮಾಷೆಯಲ್ಲ, ನಿಜ ಎನ್ನು ವುದು ಆಕೆಗೂ ಗೊತ್ತಾಯಿತು. ಬೇಗ ಒಗ್ಗರಣೆ ಹಾಕಿ, ದೇವರ ಮನೆಗೆ ಹೋಗಿ ದೀಪಗಳನ್ನು ಹಚ್ಚಿ ದೇವರ ಪೆಟ್ಟಿಗೆಗೆ ನಮಸ್ಕಾರ ಮಾಡಿದಳು, ಹೊರಕ್ಕೆ ಬರುತ್ತ, ' ನೋಡಿ, ನಾನು ಮಹಾ ಪತಿವ್ರತೆಯಾದ್ದರಿಂದ ನಿಮಗೆ ಈ ಆರ್ಡರು ಬಂತು. ನಿಮ್ಮ ಸಂಬಳ ಏನಾದರೂ ಮಾಡಿಕೊಳ್ಳಿ. ಅದರೆ ಭತ್ಯದ ದುಡ್ಡು ಒಂದು ಕಾಸನ್ನೂ ಮುಟ್ಟ ಕೂಡದು. ನನ್ನ ಹತ್ತಿರ ತಂದು ಕೊಟ್ಟು ಬಿಡಬೇಕು'- ಎಂದು ಕರಾರು ಹಾಕಿದಳು. ರಂಗಣ್ಣನು, " ನಾನು ಊಟ ಮಾಡಿಕೊಂಡು ಕಚೇರಿಗೆ ಹೋಗಿ ಎಲ್ಲವನ್ನೂ ವಿಚಾರಿಸುತ್ತೇನೆ. ಬೇಗ ಬಡಿಸು- ಎಂದು ಹೇಳಿದನು. ಆದರ೦ತೆ ಆಕೆ ಎಲೆ ಮಣೆ ಎಲ್ಲವನ್ನೂ ಹಾಕಿದಳು. ಅನ್ನವನ್ನು ಬಡಿಸಿದಳು. ದಿನವೂ ಎರಡು ಮಿಳ್ಳೆ ತುಪ್ಪ ಹಾಕುತ್ತಿದ್ದವಳು ಆ ದಿನ ನಾಲ್ಕು ಮಿಳ್ಳೆ ತುಪ್ಪ ಹಾಕಿದಳು.

ರಂಗಣ್ಣ ಊಟವನ್ನು ಮುಗಿಸಿಕೊಂಡು ಸೂಟನ್ನು ಧರಿಸಿಕೊಂಡು ಡೆಪ್ಯುಟಿ ಡೈರಕ್ಟರವರ ಕಚೇರಿಗೆ ಹೋಗಿ ವಿಚಾರಿಸಿದನು. ವರ್ಗದ ಆರ್ಡರು ಸರಿ ಎಂದು ಗೊತ್ತಾಯಿತು. ಸಾಹೇಬರನ್ನು ನೋಡಿ ತನ್ನ ಕೃತಜ್ಞತೆಯನ್ನು ಸೂಚಿಸಿ ಹಿಂದಿರುಗಿದನು. ಈ ಸಮಾಚಾರವನ್ನು ತಿಮ್ಮರಾಯಪ್ಪನಿಗೆ ತಿಳಿಸಬೇಕೆಂದು ಅವನಿಗೆ ದೊಡ್ಡದೊಂದು ಆತುರ. ಆದರೆ ಸಾಯಂಕಾಲದವರೆಗೂ ಅವನು ಮನೆಗೆ ಬರುವುದಿಲ್ಲ ಎಂದು ತಿಳಿದಿತ್ತು. ಹೇಗೋ ಕಾದಿದ್ದು ಗವೀಪುರದ ಬಡಾವಣೆ ಕಡೆಗೆ ಸಾಯಂಕಾಲ ಆರು ಗಂಟೆಗೆ ಹೋದನು. ತಿಮ್ಮರಾಯಪ್ಪ ಮನೆಗೆ ಬಂದಿರಲಿಲ್ಲ. ರಂಗಣ್ಣ ಆ ಬಡಾವಣೆಯ ಗುಹೇಶ್ವರನ ಗುಡ್ಡದ ಮೇಲೆ ಏಳು ಗಂಟೆಯವರೆಗೂ ಕುಳಿತುಕೊಂಡಿದ್ದು ಪುನಃ ಹೋಗಿ ಮನೆಯಲ್ಲಿ ವಿಚಾರಿಸಿದನು. ಆಗಲೂ ತಿಮ್ಮರಾಯಪ್ಪ ಬಂದಿರಲಿಲ್ಲ. ' ಎಷ್ಟು ಹೊತ್ತಿಗೆ ಬರುತ್ತಾರೆ ? ಎಂದು ಕೇಳಿದ್ದಕ್ಕೆ, ' ಗೊತ್ತಿಲ್ಲ. ಎಂಟು, ಒಂಬತ್ತು, ಹತ್ತು ಗಂಟೆ ಆದರೂ ಆಗುತ್ತದೆ' ಎಂದು ಉತ್ತರ ಬಂದಿತು. ಏನು ಮಾಡುವುದು ?