ಪುಟ:ರಂಗಣ್ಣನ ಕನಸಿನ ದಿನಗಳು.pdf/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗನಾಥಪುರದಲ್ಲಿ ಸಭೆ

೨೧೭

ಪುನಃ ಪಾಠ ಶಾಲೆಯಲ್ಲಿ ಸಂಘದ ಸಭೆ ನಾಲ್ಕು ಗಂಟೆಗೆ ಸೇರಿತು! ಇಪ್ಪತ್ತು ನಿಮಿಷಗಳವರೆಗೆ ಭಾರತ ವಾಚನವಾಯಿತು. ಅನಂತರ ಒಬ್ಬ ಮೇಷ್ಟ್ರು, ಬುಡಬುಡಿಕೆಯವನ ವೇಷ ಹಾಕಿಕೊಂಡು ಬಂದು ಕಣಿ ಹೇಳಿದನು. ತರುವಾಯ ರಂಗಣ್ಣನ ಭಾಷಣವಾಯಿತು. ರಂಗಣ್ಣನು ಸಂಘಗಳ ಉದ್ದೇಶವನ್ನು ವಿವರಿಸುತ್ತಾ ಹೀಗೆ ಹೇಳಿದನು : 'ವಿದ್ಯಾ ಪ್ರಚಾರದಲ್ಲಿ ನಾವುಗಳು ಮೇಲಿನ ಅಧಿಕಾರಿಗಳೊಡನೆಯೂ, ಕೈಕೆಳಗಿನ ಉಪಾಧ್ಯಯರೊಡನೆಯ, ಸುತ್ತಲ ಗ್ರಾಮಸ್ಥರೊಡನೆಯೂ ಏಗುತ್ತ, ಪರಸ್ಪರ ಸಾಮರಸ್ಯವನ್ನು ತರಬೇಕಾಗಿದೆ. ಈ ಮೂವರೊಡನೆ ವ್ಯವಹರಿಸುವುದು ಸುಲಭವಾದ ಕಾರ್ಯವಲ್ಲ. ಸಾಹೇಬರೇ ಈ ದಿನ ಅಧ್ಯಕ್ಷರಾಗಿರುವುದರಿಂದ ಅಧಿಕಾರಿಗಳ ವಿಚಾರವನ್ನು ನಾನು ಹೆಚ್ಚಾಗಿ ಹೇಳುವುದಿಲ್ಲ. ಅವರಿಂದ ನಮಗೆ ಪ್ರೋತ್ಸಾಹವೂ ಸಹಾಯವೂ ದೊರೆಯುತ್ತಿದ್ದರೆ ನಮ್ಮ ಕೆಲಸ ಚೆನ್ನಾಗಿ ನಡೆಯುತ್ತದೆ ; ಅಡಿಗಡಿಗೆ ನಮ್ಮ ಮುಖಭಂಗವಾಗುತಿದ್ದರೆ ನಮಗೆ ಉತ್ಸಾಹಭಂಗವಾಗುತ್ತದೆ. ಇಷ್ಟನ್ನು ಮಾತ್ರ ಹೇಳಿ ಉಪಾಧ್ಯಾಯರ ಮತ್ತು ಗ್ರಾಮಸ್ಥರ ವಿಷಯವನ್ನು ಪ್ರಸ್ತಾಪಮಾಡುತೇನೆ. ಈ ಇಬ್ಬರನ್ನು ತಿದ್ದುವುದು ಮಹಾ ಪ್ರಯಾಸದ ಕೆಲಸ. ಹರಿಹರರಿಗೂ ಅಸಾಧ್ಯವೆಂದು ಹೇಳಿದಮೇಲೆ ಮನುಷ್ಯ ಮಾತ್ರದವನು ಏನನ್ನು ತಾನೆ ಮಾಡ ಬಹುದು ! ನಿನಗೆ ಒಂದು ಪುರಾಣದ ಕಥೆ ಹೇಳುತ್ತೇನೆ, ಕೇಳಿ : ದೇವಲೋಕದಲ್ಲಿ ಒಂದು ದಿನ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರಿಗೆ ನಾನು ಲೋಕನಾಯಕ ತಾನು ಲೋಕನಾಯಕ ಎಂದು ದೊಡ್ಡ ಜಗಳ ಹತ್ತಿತಂತೆ ! ಆ ತ್ರಿಮೂರ್ತಿಗಳ ಜಗಳದಿಂದ ಪ್ರಳಯ ವಾತಾವರಣ ಉಂಟಾಯಿತು ಆಗ ದೇವತೆಗಳೆಲ್ಲ ಬಹಳ ವ್ಯಥೆಪಟ್ಟ ರು. ಆ ಸಮಯಕ್ಕೆ ಸರಿಯಾಗಿ ನಾರದ ಮಹರ್ಷಿಗಳು ಆ ಸಭೆಗೆ ಬಂದರು, ತ್ರಿಮೂರ್ತಿಗಳ ವೀರಾವತಾರಗಳನ್ನು ನೋಡಿ ವೀಣಾವಾದನ ಮಾಡುತ್ತ, ನಿಮ್ಮ ನಿಮ್ಮಲ್ಲಿ ಕಲಹವೇಕೆ ? ಲೋಕ ವ್ಯಾಪಾರವನ್ನು ನಡೆಸುವ ತ್ರಿಮೂರ್ತಿಗಳೇ ಜಗಳವಾಡಿದರೆ ಜನ ಬದುಕುವುದು ಹೇಗೆ ? ನಿಮ್ಮ ಜಗಳಕ್ಕೆ ಕಾರಣವೇನು ? ಎಂದು ವಿಚಾರಿಸಿದರು. ಆಗ ಅವರು ನಾನು ಲೋಕನಾಯಕ, ತಾನು ಲೋಕನಾಯಕ, ಉಳಿದವರು ನನ್ನ