ಪುಟ:ರಂಗಣ್ಣನ ಕನಸಿನ ದಿನಗಳು.pdf/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೮

ರಂಗಣ್ಣನ ಕನಸಿನ ದಿನಗಳು

ಭೃತ್ಯರು ಎಂದು ಹೇಳತೊಡಗಿದರು. ನಾರದರು ನಗುತ್ತಾ, ಒಂದು ಕೆಲಸ ಮಾಡಿ ; ನಿಮ್ಮ ಆಯುಧಗಳನ್ನು ಕೆಳಗಿಡಿ ; ನಾನು ನಿಮ್ಮ ಶಕ್ತಿಯನ್ನು ಪರೀಕ್ಷೆ ಮಾಡುತ್ತೇನೆ ; ತೇರ್ಗಡೆಯಾದವರನ್ನು ಈ ದೇವಸಭೆ ಲೋಕನಾಯಕನೆಂದು ಒಪ್ಪುತ್ತದೆ-ಎಂದು ಹೇಳಿದರು. ಆದರಂತೆ ಅವರೆಲ್ಲ ಆಯುಧಗಳನ್ನು ಕೆಳಗಿಟ್ಟರು. ನಾರದರು, ನೋಡಿ ! ನಾಯಿಯ ಬಾಲದ ಡೊಂಕನ್ನು ಸರಿಪಡಿಸಬೇಕು ! ಇಲ್ಲವಾದರೆ, ಮೇಷ್ಟ್ರ ಬುದ್ಧಿಯ ಡೊಂಕನ್ನು ಸರಿ ಪಡಿಸಬೇಕು ! ಇಲ್ಲವಾದರೆ, ಹಳ್ಳಿಯವರ ಹಟದ ಡೊಂಕನ್ನು ಸರಿಪಡಿಸಬೇಕು ! ಇವುಗಳಲ್ಲಿ ಯಾವುದೊಂದನ್ನು ಮಾಡಿದರೂ ಸರಿಯೇ, ಅವನನ್ನು ನಾವು ದೇವತಾ ಸಾರ್ವಭೌಮನೆಂದು ಒಪ್ಪಿಕೊಳ್ಳುತ್ತೇವೆ ಎಂದರು. ಆಗ ಬ್ರಹ್ಮನು ನಾಯಿಯ ಬಾಲದ ಡೊಂಕನ್ನು ಸರಿಪಡಿಸಲು ಹೊರಟನು ; ವಿಷ್ಣುವು ಮೇಷ್ಟರ ಡೊಂಕನ್ನು ಸರಿಪಡಿಸುತ್ತೇನೆಂದು ಹೊರಟನು ; ಮಹೇಶ್ವರನು ಹಳ್ಳಿಯವರ ಡೊಂಕನ್ನು ತಿದ್ದುತ್ತೇನೆಂದು ಹೊರಟನು. ಬ್ರಹ್ಮನು ದಾರಿಯಲ್ಲಿ ಸಿಕ್ಕನಾಯಿಗಳನ್ನೆಲ್ಲ ಹಿಡಿದು, ಅವುಗಳ ಬಾಲವನ್ನು ನೇವರಿಸಿ, ಬಗ್ಗಿಸಿ, ಡೊಂಕನ್ನು ಸರಿಪಡಿಸಲು ಬಹಳವಾಗಿ ಪ್ರಯತ್ನ ಪಟ್ಟನು. ಅದು ಆಗಲಿಲ್ಲ. ಆಗ ಅವನು ಒಂದು ಕುಯುಕ್ತಿಯನ್ನು ಮಾಡಿದನು. ಒಂದು ನಾಯಿಮರಿಯ ಬಾಲಕ್ಕೆ ಕೆಳಗಡೆ ಒಂದು ಕಂಬಿಯನ್ನು ಕಣ್ಣಿಗೆ ಕಾಣದಂತೆ ಸೇರಿಸಿ ಕಟ್ಟಿದನು. ಆಗ ಬಾಲ ನೆಟ್ಟಗಾಯಿತು ! ತನ್ನಲ್ಲೇ ಸಂತೋಷಪಡುತ್ತ, ನೋವಿನಿಂದ ಕುಂಯಿಗುಟ್ಟುತ್ತಿದ್ದ ನಾಯಿಯನ್ನು ಕಂಕುಳಲ್ಲಿ ಇರುಕಿಕೊಂಡು ಬ್ರಹ್ಮನು ದೇವಸಭೆಗೆ ಬಂದನು.'

'ಅತ್ತ ವಿಷ್ಣುವು ಮೇಷ್ಟರ ಸಹವಾಸಮಾಡಿ ಡೊಂಕನ್ನು ತಿದ್ದಲು ಪ್ರಯತ್ನ ಪಟ್ಟನು. ತಾನು ಎದುರಿಗೆ ಕುಳಿತಿದ್ದು ಒತ್ತಿ ಹಿಡಿದಿರುವ ಪರ್ಯ೦ತರವೂ ಡೊಂಕು ಕಾಣುತ್ತಿರಲಿಲ್ಲ. ಮೇಷ್ಟು ಸರಿಯಾಗಿಯೇ ಇರುತ್ತಿದ್ದನು. ತಾನು ಹಿಡಿತ ಬಿಟ್ಟು ಸ್ವಲ್ಪ ಮರೆಯಾಗುತ್ತಲೂ ಆ ಡೊಂಕು ಪುನಃ ಕಾಣಿಸಿಕೊಳ್ಳುತ್ತಲೇ ಇತ್ತು. ವಿಷ್ಣುವು ಹತಾಶನಾಗಿ ಆ ಕಾರ್ಯ ತನ್ನಿಂದ ಸಾಧ್ಯವಿಲ್ಲವೆಂದು ಖಿನ್ನತೆಯಿಂದ ದೇವಲೋಕಕ್ಕೆ ಹಿಂದಿರುಗಿದನು. ಮಗುದೊಂದು ಕಡೆ ಮಹೇಶ್ವರನು ಹಳ್ಳಿಯವರಲ್ಲಿ