ಪುಟ:ರಂಗಣ್ಣನ ಕನಸಿನ ದಿನಗಳು.pdf/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗನಾಥಪುರದಲ್ಲಿ ಸಭೆ

೨೨೧

ಪಾಠ ಶಾಲೆಯಲ್ಲಿ ನೂರೈವತ್ತು ಮಂದಿ ಮಕ್ಕಳಿದ್ದಾರೆ. ಸುತ್ತಲೂ ಹತ್ತಾರು ಪಾಠಶಾಲೆಗಳಿವೆ. ಈ ಊರಿಗೊಂದು ಮಿಡಲ್ ಸ್ಕೂಲನ್ನು ಕೊಟ್ಟರೆ ಬಹಳ ಚೆನ್ನಾಗಿರುತ್ತದೆ. ಗ್ರಾಮಸ್ಥರು ಉದಾರವಾಗಿ ಸಹಾಯಮಾಡಲು ಸಿದ್ಧನಾಗಿದ್ದಾರೆ. ಮಿಡಲ್ ಸ್ಕೂಲಿಗೆ ಕಟ್ಟಡವನ್ನು ಮುಫ್ತಾಗಿ ಕಟ್ಟಿಕೊಡುತ್ತಾರೆ ! ಆದ್ದರಿಂದ ದಯವಿಟ್ಟು ಒಂದು ಮಿಡಲ್ ಸ್ಕೂಲ್ ಅಪ್ಪಣೆಯಾಗಬೇಕು !ಎಂದು ಬೇಡಿಕೆಯನ್ನು ಸಲ್ಲಿಸಿದರು. ಬಳಿಕ ಇನ್ ಸ್ಪೆಕ್ಟರು ಮಾಡುತ್ತಿರುವ ಕೆಲಸವನ್ನು ಪ್ರಶಂಸೆಮಾಡಿ, ಡಿ, ಇ, ಓ, ಸಾಹೇಬರಿಗೆ ವಂದನೆಗಳನ್ನು ಅರ್ಪಿಸಿದರು.

ಸಾಹೇಬರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಉಪಾಧ್ಯಾಯರ ಸಂಘಗಳ ಪ್ರಯೋಜನವನ್ನು ತಿಳಿಸಿ, ರ೦ಗಣ್ಣನ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಗಳು ಬಹಳ ಉಪಕಾರಕವಾಗಿರುವುವೆಂದೂ, ಸಂಸ್ಥಾನಕ್ಕೆ ಮಾದರಿಯಾಗಿದೆಯೆಂದೂ ಹೇಳಿದರು. ಗಂಗೇಗೌಡರಂಥ ಮುಂದಾಳುಗಳು ದೇಶದಲ್ಲಿರುವುದು ದೇಶದ ಸೌಭಾಗ್ಯವೆಂದು ಹೊಗಳಿದರು. ಬಳಿಕ ಮಿಡಲ್ ಸ್ಕೂಲಿನ ವಿಚಾರ ಎತ್ತಿ, ಈ ಊರು ಬಹಳ ಮುಂದುವರಿದಿದೆ ಎನ್ನುವುದು ನನಗೆ ಈ ಸಾಯಂಕಾಲ ಮನದಟ್ಟಾಯಿತು. ಊರು ನಿಜವಾಗಿಯೂ ಮಿಡಲ್ ಸ್ಕೂಲನ್ನು ಪಡೆಯಲು ಅರ್ಹವಾಗಿದೆ ! ಆದಷ್ಟು ಬೇಗ ಕೊಡಲು ತೀರ್ಮಾನಿಸಿದ್ದೇನೆ - ಎಂದು ಹೇಳಿದರು. ಎಲ್ಲರೂ ಚಪ್ಪಾಳೆ ತಟ್ಟಿದರು. 'ಕಾಯೌ ಶ್ರೀ ಗೌರಿ' ಯನ್ನು ಹಾಡಿದ ನಂತರ ಸಭೆ ಮುಕ್ತಾಯವಾಯಿತು.

ಸಾಯಂಕಾಲ ಐದೂವರೆ ಗಂಟೆಯಾಯಿತು. ಬಸ್ಸು ಸ್ಕೂಲ ಬಳಿಗೆ ಬಂತು, ಸಾಹೇಬರನ್ನು ಬಹಳ ವೈಭವದಿಂದ ಬಸ್ಸಿನ ಬಳಿಗೆ ಊರಿನ ಜನ ಕರೆದು ಕೊಂಡುಹೋದರು, ಸಾಹೇಬರು, ರಂಗಣ್ಣನ ಕೈ ಕುಲುಕಿ, ರಂಗಣ್ಣನವರೇ ! ನನಗೆ ಬಹಳ ಸಂತೋಷವಾಗಿದೆ. ನೀವು ಮಾಡುತ್ತಿರುವ ಕೆಲಸವನ್ನು ದೊಡ್ಡ ಸಾಹೇಬರುಗಳಿಗೆ ತಿಳಿಸುತ್ತೇನೆ. ಈಗ ನಿಮ್ಮಿಂದ ಎರಡು ಕಾರ್ಯಗಳು ನಡೆಯಬೇಕು. ಮೊದಲನೆಯದು, ಗರುಡನಹಳ್ಳಿ ಹನುಮನಹಳ್ಳಿ ವ್ಯಾಜ್ಯ ವನ್ನು ಪಂಚಾಯತಿ ಮಾಡಿ ನೀವು ಪರಿಹರಿಸಬೇಕು. ಎರಡನೆಯದು, ಈಚೆಗೆ ಮುಂಜೂರಾಗಿರುವ ಕೆಲವು