ಪುಟ:ರಂಗಣ್ಣನ ಕನಸಿನ ದಿನಗಳು.pdf/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೪

ರಂಗಣ್ಣನ ಕನಸಿನ ದಿನಗಳು

ಗರುಡನ ಹಳ್ಳಿಯ ಪಟೇಲ್, ಕಾರ್ಯದರ್ಶಿ ಹನುಮನ ಹಳ್ಳಿಯ ಶ್ಯಾನುಭೋಗ್, ಒಂದೇ ಪಂಚಾಯತಿ ಆದರೂ, ಗರುಡನ ಹಳ್ಳಿಯಲ್ಲೊಂದು ಪಂಚಾಯತಿ ಹಾಲ್ ! ಹನುಮನ ಹಳ್ಳಿಯಲ್ಲೊಂದು ಪಂಚಾಯತಿ ಹಾಲ್ ! ಒಂದು ತಿಂಗಳು ಪಂಚಾಯತಿಯ ಮೀಟಿಂಗು ಗರುಡನ ಹಳ್ಳಿಯಲ್ಲಿ ಸೇರಿದರೆ, ಮುಂದಿನ ತಿಂಗಳು ಹನುಮನ ಹಳ್ಳಿಯಲ್ಲಿ ಸೇರುತ್ತಿತ್ತು. ಹೀಗೆ ಪರ್ಯಾಯ ಕ್ರಮದಲ್ಲಿ ಪಂಚಾಯತಿ ಸಭೆ ಎರಡು ಹಳ್ಳಿಗಳಲ್ಲಿಯೂ ನಡೆಯುವಂತೆ ಏರ್ಪಾಡಾಗಿತ್ತು.

ಪಂಚಾಯತಿಯವರು ಗರುಡನ ಹಳ್ಳಿಯಲ್ಲಿ ಸಭೆ ಸೇರಿದ ಒಂದು ತಿಂಗಳಲ್ಲಿ ಒಂದು ಪಾಠಶಾಲೆಯನ್ನು ಸರಕಾರದವರು ಕೊಡಬೇಕೆಂದೂ ಸಾಮಾನು ಗಳಿಗಾಗಿ ಒಂದು ನೂರು ರುಪಾಯಿಗಳನ್ನು ಖಜಾನೆಗೆ ಕಟ್ಟಿರುವುದಾಗಿಯೂ ತಿಳಿಸಿ ನಿರ್ಣಯಮಾಡಿ ಇಲಾಖೆಗೆ ಕಳಿಸಿಕೊಟ್ಟರು. ಇಲಾಖೆಯವರು ಅಲ್ಲಿಗೆ ಒಂದು ಗ್ರಾಂಟ್ ಸ್ಕೂಲನ್ನು ಮಂಜೂರಿ ಮಾಡಿದರು, ಹಿಂದಿನ ಇನ್ ಸ್ಪೆಕ್ಟರು ಒಬ್ಬ ಮೇಷ್ಟ್ರನ್ನು ಗೊತ್ತು ಮಾಡಿ ಪಾಠಶಾಲೆಯನ್ನು ತೆರೆಯುವಂತೆಯೂ ಗ್ರಾಮಸ್ಥರಿಗೆ ಹೇಳಿ ಬೆಂಚು, ಬೋರ್ಡು ಮೊದಲಾದುವನ್ನು ಕಚೇರಿಯಿಂದ ತೆಗೆಸಿಕೊಂಡು ಹೋಗ ಬೇಕೆಂದೂ ಅಪ್ಪಣೆ ಮಾಡಿದರು. ಅವರು ಕೊಟ್ಟ ಅಪ್ಪಣೆಯಲ್ಲಿ ಹನುಮನಹಳ್ಳಿಯ ಪಂಚಾಯತಿ ಹಾಲಿನಲ್ಲಿ ವಾಠಶಾಲೆಯನ್ನು ತೆರೆಯಬೇಕೆಂದು ಹೇಳಿತ್ತು. ಆ ಮೇಷ್ಟು ಗರುಡನ ಹಳ್ಳಿ ಯಾವುದು ? ಹನುಮನ ಹಳ್ಳಿ ಯಾವುದು ? ಎಂಬುದು ತಿಳಿಯದೆ ಆರ್ಡರ್ ತೆಗೆದು ಕೊಂಡು ಬರುತ್ತ ದಾರಿಯಲ್ಲಿ ಮೊದಲು ಸಿಕ್ಕ ಗರುಡನ ಹಳ್ಳಿಯಲ್ಲಿ ಅದನ್ನು ತೋರಿಸಿದನು. ಚೇರ್ಮನ್ ಆಗಿದ್ದ ಪಟೇಲನು ಮೇಷ್ಟನ್ನು ಅಲ್ಲಿಯೇ ನಿಲ್ಲಿಸಿಕೊಂಡು ಹುಡುಗರನ್ನು ಜಮಾಯಿಸಿ ಕೊಟ್ಟು ಪಾಠಶಾಲೆಯ ಪ್ರಾರಂಭೋತ್ಸವವನ್ನು ನೆರವೇರಿಸಿದನು ; ಮತ್ತು ಮಾರನೆಯ ದಿನ ಗಾಡಿಯನ್ನು ಜನಾರ್ದನಪುರಕ್ಕೆ ಕಳಿಸಿ ಬೋರ್ಡು ಬೆಂಚು ಮೊದಲಾದುವನ್ನು ತರಿಸಿ ಕೊಂಡನು. ಪಾಠ ಶಾಲೆಯನ್ನು ಪಂಚಾಯತಿಯ ಚೇರ್ಮನ್ ನ ಆಜ್ಞಾನುಸಾರವಾಗಿ ಪ್ರಾರಂಭ ಮಾಡಿರುವುದಾಗಿಯೂ ಸಾಮಾನು