ಪುಟ:ರಂಗಣ್ಣನ ಕನಸಿನ ದಿನಗಳು.pdf/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೦

ರಂಗಣ್ಣನ ಕನಸಿನ ದಿನಗಳು

ಬಂತು. ಆದ್ದರಿಂದಲೇ ರಂಗನಾಥಪುರದಲ್ಲಿ ಸಂಘದ ಸಭೆ ಮುಗಿದ ಮೇಲೆ, ಸಾಹೇಬರು ಬಸ್ಸು ಹತ್ತುವ ಹೊತ್ತಿನಲ್ಲಿ ರಂಗಣ್ಣನಿಗೆ ಆ ಗರುಡನ ಹಳ್ಳಿ ಹನುಮನ ಹಳ್ಳಿಗಳ ವ್ಯಾಜ್ಯವನ್ನು ಹೇಗಾದರೂ ಪರಿಹಾರಮಾಡಿ ವರದಿ ಕಳಿಸಬೇಕೆಂದು ಹೇಳಿದ್ದು. ರಂಗಣ್ಣನು ಏನೋ ಒಂದು ಆತ್ಮ ವಿಶ್ವಾಸದಿಂದ, “ ಆಗಲಿ ಸಾರ್ !' ಎಂದು ಹೇಳಿದ್ದನು.

ರಂಗಣ್ಣನೂ ಶಂಕರಪ್ಪ ನೂ ಮೊದಲು ಹನುಮನ ಹಳ್ಳಿಗೆ ಹೋಗಿ ಪಂಚಾಯತಿ ಹಾಲಿನಲ್ಲಿ ಕುಳಿತರು. ಇನ್ಸ್ಪೆಕ್ಟರ ಸವಾರಿ ಬಂದಿದೆ ಎಂದು ತಿಳಿದು ಶ್ಯಾನುಭೋಗನೂ ಕೆಲವರು ಪಂಚಾಯತಿ ಮೆಂಬರುಗಳೂ ಬಂದರು. ಈಚೆಗೆ ಸ್ಕೂಲನ್ನು ಕಳೆದುಕೊಂಡು ಅಪಜಯದ ನೋವನ್ನು ಅನುಭವಿಸುತ್ತಿದ್ದವರು ಅವರು. ಏನು ಸ್ವಾಮಿ ! ನಿಮ್ಮ ಇಲಾಖೆಯವರ ದರ್ಬಾರು ಅತಿ ವಿಚಿತ್ರವಾಗಿದೆ ! ರಿಕಾರ್ಡನ್ನು ನೋಡಿ ನ್ಯಾಯವನ್ನು ದೊರಕಿಸುವುದಕ್ಕೆ ಬದಲು ಬಾಳೇಹಣ್ಣಿನ ಗೊನೆಗಳನ್ನು ನೋಡುತ್ತ ಸಾಹೇಬರುಗಳು ತಿರ್ಮಾನಮಾಡುತ್ತಾರೆ ! ' ಎಂದು ಅವರು ಕಟುವಾಗಿ ಆಡಿದರು.

'ನಿಮ್ಮ ನಿಮ್ಮಲ್ಲಿ ಈ ವ್ಯಾಜ್ಯವನ್ನು ಪರಿಹಾರ ಮಾಡಿಕೊಳ್ಳದೆ ಬಾಳೆಹಣ್ಣಿನ ಗೊನೆಗಳನ್ನು ಎರಡು ಕಕ್ಷಿಯವರೂ ಏಕೆ ಹೊತ್ತು ಕೊಂಡು ಹೋದಿರಿ ? ' ಎಂದು ನಗುತ್ತಾ ರಂಗಣ್ಣ ಕೇಳಿದನು.

'ಈ ವ್ಯಾಜ್ಯ ನಮ್ಮ ನಮ್ಮಲ್ಲೇ ಫೈಸಲ್ ಆಗುವುದಿಲ್ಲ ಸ್ವಾಮಿ ! '

'ಗರುಡನ ಹಳ್ಳಿಯವರನ್ನು ಇಲ್ಲಿಗೆ ಕರೆಸಿ, ಅವರ ವಾದವನ್ನು ಕೇಳೋಣ '

'ಅವರು ಈ ಹಳ್ಳಿ ಯ ಎಲ್ಲೆ ಯೊಳಕ್ಕೆ ಬರುವುದಿಲ್ಲ ಸ್ವಾಮಿ !'

'ಒಳ್ಳೆಯದು, ನಡೆಯಿರಿ. ಆವರ ಹಳ್ಳಿಗೇನೆ ನಾವೆಲ್ಲ ಹೊಗೋಣ, ಅಲ್ಲಿಯೂ ಪಂಚಾಯತಿ ಹಾಲ್ ಇದೆಯಲ್ಲ !'

'ನಾವು ಆ ಹಳ್ಳಿಯ ಎಲೆಯನ್ನು ಮೆಟ್ಟುವುದಿಲ್ಲ ಸ್ವಾಮಿ !'

'ಹಾಗಾದರೆ ಈ ವ್ಯಾಜ್ಯ ಹೇಗೆ ಫೈಸಲಾಗಬೇಕು ? '

'ಸರಕಾರಕ್ಕೆ ಅರ್ಜಿ ಗುಜರಾಯಿಸಿಕೊಂಡಿದ್ದೇವೆ, ನ್ಯಾಯವನ್ನು ನೋಡಿ ನಮ್ಮ ಹಳ್ಳಿಯಲ್ಲಿ ಸ್ಕೂಲು ಮಾಡುವಂತೆ ಹುಕುಂ ಮಾಡಲಿ !'